ಸರ್ಕಾರಗಳು ರೈತರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ : ಮಲ್ಲಿಕಾರ್ಜುನ ಸ್ವಾಮೀಜಿ.

ಹೊಸಪೇಟೆ :

     ದೇಶದ ರೈತರಿಗೆ ಆಳುವ ಸರ್ಕಾರಗಳು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಹಾಗು ನೀರಾವರಿ ವ್ಯವಸ್ಥೆ ಕಲ್ಪಿಸಿ ಕೊಟ್ಟರೆ ಸಾಕು. ಸಾಲಮನ್ನಾ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಇವೆರಡೂ ಮಾಡದೇ ಬರೀ ರೈತರನ್ನು ದೇಶದ ಬೆನ್ನೆಲುಬು ಅಂತಾ ಕರೆದು, ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆರೋಪಿಸಿದರು.

    ನಗರದ ಹೊರವಲಯದ ತುಂಗಭದ್ರಾ ಜಲಾಶಯದಲ್ಲಿ ಗುರುವಾರ 3ನೇ ವರ್ಷದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ದೇಶಕ್ಕೆ ಅನ್ನ ಕೊಡುತ್ತಾನೆ. ಆದರೆ ಆತನ ಪರಿಸ್ಥಿತಿ ಸಂಕಷ್ಟದಲ್ಲಿದೆ. ಒಂದು ಕಡೆ ಬೆಳೆದ ಬೆಳೆಗೆ ಉತ್ತಮ ಬೆಲೆ ಇಲ್ಲ. ಇನ್ನೊಂದು ಕಡೆ ಇಳುವರಿನೂ ಇಲ್ಲ. ಜೊತೆಗೆ ಫಸಲಿಗೆ ನೀರಿನ ಸಮಸ್ಯೆ ಬೇರೆ. ಹೀಗಾಗಿ ಆತ ಹೇಗೆ ಉದ್ದಾರ ಆಗಬೇಕು? ಎಂದ ಅವರು, ರೈತನ ಬಾಳು ಹಸನಾಗಿದ್ದರೆ ಮಾತ್ರ ದೇಶ ಸುಭಿಕ್ಷೆಯಾಗಿರುತ್ತದೆ ಎಂದರು.

      ಸರ್ಕಾರಗಳು ಮಾಡದ ಕೆಲಸವನ್ನು ಇಂದು ರೈತರು ಸೇರಿ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇದೆ. ನೀವು ಎಲ್ಲಿಗೆ ಕರೆದರೂ ನಾವು ಬರುತ್ತೇವೆ. ಎಲ್ಲರು ಸೇರಿ ದೆಹಲಿಗೆ ಹೋಗಿ ಪ್ರಧಾನಿಯವರನ್ನು ಕಂಡು ನಮ್ಮ ಕೆಲಸ ಆಗುವವರೆಗೂ ನಾವು ಅಲ್ಲಿಂದ ಕಾಲು ಕಿತ್ತೋದು ಬೇಡ ಎಂದು ಹೇಳಿದರು.

      ಅಣ್ಣಾ ಫೌಂಡೇಶನ್‍ನ ರಾಜಶೇಖರ ಮುಲಾಲಿ ಮಾತನಾಡಿ, ತುಂಗಭದ್ರಾ ನದಿಯಲ್ಲಿ 30 ಟಿಎಂಸಿ ಹೂಳು ತುಂಬಿದೆ. ಹೆಚ್ಚಿಗೆ ಸಂಗ್ರಹವಾಗಬೇಕಿದ್ದ ನೀರು ಪೋಲಾಗುತ್ತಿದೆ. ಇದರಿಂದ 2ನೇ ಬೆಳೆಗೆ ನೀರು ಸಿಗುತ್ತಿಲ್ಲ. ಹೀಗಾಗಿ ಮುಂದಿನ 2-3 ತಿಂಗಳಲ್ಲಿ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ವಿಶೇಷ ಪ್ಯಾಕೇಜು ನೀಡುವಂತೆ ಪ್ರಧಾನಿಯವರ ಮೇಲೆ ಒತ್ತಡ ಹಾಕುವ ಕೆಲಸ ಮಾಡೋಣ ಎಂದರು.

       ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಮಾತನಾಡಿ, ರೈತರನ್ನು ಕಾಪಾಡಿ ಎಂದು ನಾವು ಸರ್ಕಾರಗಳನ್ನು ಪುಣ್ಯಕೋಟಿ ರೀತಿಯಲ್ಲಿ ಮೊರೆ ಇಡುವಂಥ ಪರಿಸ್ಥಿತಿ ಬಂದಿದೆ. ರೈತರ ಬಗ್ಗೆ ಯಾವ ಸರ್ಕಾರಗಳಿಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಬರಗಾಲ ಇದೆ. ಸಿಎಂ ಕುಮಾರಸ್ವಾಮಿಯವರು ಮಗನ ಸೋಲಿನ ಚಿಂತೆ ಬಿಟ್ಟು, ಬರಕ್ಕೆ ಪರಿಹಾರ ಹುಡುಕುವ ಕೆಲಸ ಮಾಡಬೇಕು ಎಂದರು.

        ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ತುಂಗಭದ್ರಾ ಆಣೆಕಟ್ಟು ಕಟ್ಟಿ 75 ವರ್ಷವಾದರೂ ಯಾವತ್ತೂ 2ನೇ ಬೆಳೆಗೆ ನೀರು ಇಲ್ಲದಂಥಹ ಪರಿಸ್ಥಿತಿ ಬಂದಿದ್ದಿಲ್ಲ. ಇದಕ್ಕೆ ಜಲಾಶಯದಲ್ಲಿ ತುಂಬಿದ ಹೂಳೇ ಕಾರಣ. ಕಳೆದ 3 ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಸರ್ಕಾರಗಳು ಹೂಳೆತ್ತುವ ವಿಚಾರದಲ್ಲಿ ಮೌನ ವಹಿಸಿವೆ. ಆದರೂ ಎಲ್ಲಾ ಮಠಾಧೀಶರ ಸಹಕಾರದಿಂದ ಹೂಳೆತ್ತುವ ಕಾರ್ಯವನ್ನು ಮುಂದುವರೆಸಿದ್ದೇವೆ. ಇದಕ್ಕೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

        ಇದೇ ವೇಳೆ ಅಣ್ಣಾ ಫೌಂಡೇಶನ್‍ನ ಅಧ್ಯಕ್ಷ ರಾಜಶೇಖರ ಮುಲಾಲಿಯವರು ತುಂಗಭದ್ರಾ ರೈತ ಸಂಘಕ್ಕೆ ರೂ. 51,000/ ಸಾವಿರ ದೇಣಿಗೆ ನೀಡಿದರು.

        ಕಾರ್ಯಕ್ರಮದಲ್ಲಿ ಎಮ್ಮಿಗನೂರು ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಹ.ಬೊ.ಹಳ್ಳಿಯ ಹಾಲಶಂಕರ ಸ್ವಾಮೀಜಿ, ನಂದೀಪುರ ಮಹೇಶ್ವರ ಸ್ವಾಮೀಜಿ, ಬಳ್ಳಾರಿ ಕನಕದುರ್ಗಮ್ಮ ದೇವಿಯ ಪ್ರಧಾನ ಅರ್ಚಕ ಪಿ.ಗಾದೆಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಂಗ್ಲೆ ಮಲ್ಲಿಕಾರ್ಜುನ, ದರೂರು ಶಾಂತನಗೌಡ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link