ಸರಳ ಸ್ವಾತಂತ್ರ್ಯ ದಿನಾಚರಣೆಗೆ ಸರ್ಕಾರದ ನಿರ್ಧಾರ.!

ಬೆಂಗಳೂರು

   ರಾಜ್ಯ ಪ್ರವಾಹದಿಂದ ತತ್ತರಿಸಿರುವ ಬೆನ್ನಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವ ಸರ್ಕಾರ ಅದೇ ಕಾಲಕ್ಕೆ ಸಚಿವರ ಉಪಸ್ಥಿತಿಯಿಲ್ಲದೆ ಇರುವುದರಿಂದ ಅಧಿಕಾರಿಗಳೇ ಅಂದು ಧ್ವಜಾರೋಹಣ ಕಾರ್ಯ ನಡೆಸಲು ಸಿಗ್ನಲ್ ನೀಡಿದೆ.

   ಈ ಸಂಬಂಧ ಅಧಿಕೃತ ಆದೇಶ ಹೊರಸಿದ್ದು ಅಗಸ್ಟ್ ಹದಿನೈದರಂದು ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾಧಿಕಾರಿಗಳು,ಉಪವಿಭಾಗಗಳ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್‍ಗಳು ಧ್ವಜಾರೋಹಣ ಕಾರ್ಯ ನಡೆಸುವಂತೆ ಆದೇಶಿಸಲಾಗಿದೆ.

   ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಹದಿನೆಂಟು ದಿನ ಹಾಗೂ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಿ ಹದಿನಾರು ದಿನಗಳಾದರೂ ಇದುವರೆಗೆ ಯಡಿಯೂರಪ್ಪ ಅವರ ಸರ್ಕಾರ ಒನ್‍ಮ್ಯಾನ್ ಷೋ ಸರ್ಕಾರವಾಗಿದೆ.

   ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನಗಳಾದರೂ ಮಂತ್ರಿ ಮಂಡಲವನ್ನೇ ವಿಸ್ತರಣೆ ಮಾಡದೆ ಏಕಾಂಗಿಯಾಗಿ ದಾಖಲೆ ಬರೆದಿರುವ ಯಡಿಯೂರಪ್ಪ ಇದೀಗ ಅನಿವಾರ್ಯವಾಗಿ,ಸರ್ಕಾರವಿದ್ದರೂ ಅಧಿಕಾರಿಗಳಿಗೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವಂತೆ ಸೂಚಿಸುವಂತಾಗಿದೆ.

   ಸರ್ಕಾರ ರಚಿಸಲು ಪೂರಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅನರ್ಹಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರಿಂದ ಅವರ ವಿವಾದ ಇತ್ಯರ್ಥವಾಗಲಿ ಎಂದು ಕಾದ ಯಡಿಯೂರಪ್ಪ ತಮ್ಮ ಜತೆ ಉಳಿದವರ್ಯಾರನ್ನೂ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲಿಲ್ಲ.ಇದಾದ ನಂತರ ವಿವಾದ ವಿಳಂಬವಾಗಿ ಇತ್ಯರ್ಥವಾದರೆ ಏನು ಮಾಡಬೇಕು?ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಹದಿನೈದು ಮಂದಿ ಪ್ರಮುಖರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ ಯಡಿಯೂರಪ್ಪ ಹೈಕಮಾಂಡ್ ವರಿಷ್ಟರನ್ನು ಭೇಟಿ ಮಾಡಿದರು.

    ಆದರೆ ಆ ಕಾಲದಲ್ಲಿ ಪಕ್ಷದ ಹಿರಿಯ ನಾಯಕಿ,ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ತೀರಿಕೊಂಡ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಕುರಿತು ಆಸಕ್ತಿ ತೋರದ ಹೈಕಮಾಂಡ್ ವರಿಷ್ಟರು,ಮೊದಲು ರಾಜ್ಯದಲ್ಲಿ ಶುರುವಾಗಿರುವ ನೆರೆ ಪರಿಸ್ಥಿತಿಯ ಕಡೆ ಗಮನ ಕೊಡಿ ಎಂದು ವಾಪಸ್ ಕಳಿಸಿದ್ದರು.

   ಇದಾದ ನಂತರ ಜಮ್ಮು-ಕಾಶ್ಮೀರದ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿತು.ಈ ಕೆಲಸದ ನಂತರ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದ ಕೇಂದ್ರ ಸರ್ಕಾರ ಅಗಸ್ಟ್ ಹದಿನೈದರವರೆಗೆ ಸಚಿವ ಸಂಪುಟ ವಿಸ್ತರಣೆ ಬೇಡ ಎಂದೇ ರಾಜ್ಯದ ನಾಯಕರಿಗೆ ಸೂಚನೆ ನೀಡಿತು.

    ಪರಿಣಾಮವಾಗಿ ಅಧಿಕಾರ ಹಿಡಿದ ನಂತರ ಸುಧೀರ್ಘ ಕಾಲ ಒನ್ ಮ್ಯಾನ್ ಆರ್ಮಿ ಎಂಬ ಖ್ಯಾತಿ ಪಡೆದ ಯಡಿಯೂರಪ್ಪ ಇದರ ಪರಿಣಾಮವಾಗಿಯೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅಧಿಕಾರಿಗಳೇ ಧ್ವಜಾರೋಹಣ ಕಾರ್ಯ ನಡೆಸಲು ಒಪ್ಪಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap