ಭಾರತ್ ಬಂದ್ ಗೆ ಟಾಂಗ್ ಕೊಡಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು

    ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವುಗಳನ್ನು ವಿರೋಧಿಸಿ ಬಿಜೆಪಿಯೇತರ ಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‍ಗೆ ಕರೆ ನೀಡಿದ್ದು,ಇದಕ್ಕೆ ತಿರುಗೇಟು ನೀಡಲು ರಾಜ್ಯದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

    ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಎನ್‍ಡಿಎ ಸರ್ಕಾರದ ವಿರುದ್ಧ ನಡೆಯುತ್ತಿರುವ ಭಾರತ್ ಬಂದ್ ಆದ್ದರಿಂದ ಇದನ್ನು ವಿಫಲಗೊಳಿಸಲು ರಾಜ್ಯ ಸರ್ಕಾರ ತನ್ನ ವಿವಿಧ ಇಲಾಖೆಗಳಿಗೆ,ಸಾರ್ವಜನಿಕರಿಗೆ ಕರೆ ನೀಡಿದೆ.ಸಾರಿಗೆ ಇಲಾಖೆಯ ನೌಕರರಿಗೆ ಬಹಿರಂಗವಾಗಿಯೇ ಕರೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು,ಭಾರತ್ ಬಂದ್ ಮಾಡುವುದೆಂದರೆ ದೇಶದ ಆರ್ಥಿಕ ಶಕ್ತಿಯನ್ನು ಕುಗ್ಗಿಸುವುದು ಎಂದರ್ಥ.ಹೀಗಾಗಿ ದೇಶದ ಅಭಿವೃದ್ಧಿಗೆ ತೊಡಕಾಗಿರುವ ಬಂದ್‍ಗೆ ಸಹಕಾರ ನೀಡಬಾರದು ಎಂದು ಸಾರಿಗೆ ಇಲಾಖೆ ನೌಕರರಿಗೆ ಕರೆ ನೀಡಿದ್ದಾರೆ.

     ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉನ್ನತ ಪೋಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದು ಭಾರತ್ ಬಂದ್‍ನ್ನು ಯಶಸ್ವಿಯಾಗಿಸಲು ಬಿಜೆಪಿ ವಿರೋಧಿ ಶಕ್ತಿಗಳು ಬೀದಿಗಿಳಿಯಲಿದ್ದು ಸಕಾಲಿಕ ಕ್ರಮ ಕೈಗೊಳ್ಳದೆ ಹೋದರೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತವೆ.ಇದಕ್ಕೆ ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.

    ಎಲ್ಲೆಡೆ ಬಿಗಿಬಂದೋಬಸ್ತ್ ಕೈಗೊಳ್ಳಿ.ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಇರಲಿ.ಯಾವ ಕಾರಣಕ್ಕೂ ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿಗಳು ಪೋಲೀಸರಿಗೆ ಸ್ಪಷ್ಟ ಸೂಚನೆ ನೀಡಿದರು.ರಾಷ್ಟ್ರೀಯ ಪೌರತ್ವ ಕಾಯ್ದೆ ಹಾಗೂ ಸಿಎಎ ವಿರೋಧಿಸುವ ಶಕ್ತಿಗಳು ಬಂದ್ ಕರೆಯ ಹಿಂದೆ ದೊಡ್ಡ ಮಟ್ಟದಲ್ಲಿ ನಿಂತುಕೊಂಡಿವೆ.ಇದೇ ರೀತಿ ವಿವಿಧ ಶಕ್ತಿಗಳು ಕೇಂದ್ರದ ವಿರುದ್ಧ ಕೆಂಡ ಕಾರುತ್ತಿವೆ.ಹೀಗಾಗಿ ನಾಳಿನ ಬಂದ್ ಯಶಸ್ವಿಯಾಗಬೇಕು ಎಂದು ಅವು ಎಲ್ಲ ರೀತಿಯ ಪ್ರಯತ್ನ ಮಾಡುತ್ತವೆ.

    ಹೀಗಾಗಿ ಇಂತಹ ಶಕ್ತಿಗಳ ಕೈ ಮೇಲಾಗದಂತೆ ನೋಡಿಕೊಳ್ಳಿ.ಸಮಾಜಘಾತಕ ಶಕ್ತಿಗಳ ಮೇಲೆ ಕಣ್ಣಿರಲಿ.ಸ್ವಲ್ಪ ಎಚ್ಚರ ತಪ್ಪಿದರೂ ಪರಿಸ್ಥಿತಿ ಕೈ ಮೀರಬಹುದು ಎಂದು ಮುಖ್ಯಮಂತ್ರಿಗಳು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಪೋಲೀಸ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಡಿ ಬರುವ ಎಲ್ಲ ಪ್ರದೇಶಗಳ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಿ ಸಾರ್ವಜನಿಕರಿಗೆ ಮುಷ್ಕರ ನಿರತರು ಯಾವುದೇ ರೀತಿಯ ಕಿರುಕುಳ ನೀಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

      ಈ ಮಧ್ಯೆ ರಾಜ್ಯಾದ್ಯಂತ ಈಗಾಗಲೇ ಆಯಾ ಪೋಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್ ಕ್ರಮ ಕೈಗೊಂಡಿದ್ದು ಬುಧವಾರದ ಭಾರತ್ ಬಂದ್ ಅನ್ನು ಸಂಪೂರ್ಣ ವಿಫಲಗೊಳಿಸಲು ಎಲ್ಲ ಯತ್ನಗಳನ್ನು ಆರಂಭಿಸಿದ್ದಾರೆ.
ಹೀಗೆ ಸರ್ಕಾರಿ ಕಛೇರಿಗಳು,ಶಾಲೆಗಳು ಎಂದಿನಂತೆ ನಡೆಯಲಿದ್ದು ಬಸ್ ಸಂಚಾರ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿವೆ.ಈ ಮುನ್ನ ಬಂದ್ ವೇಳೆಯಲ್ಲಿ ಬೆಳಗಿನ ಜಾವವೇ ಹಿಂಸಾಚಾರ ನಡೆಸಿ ಬಸ್ಸುಗಳಿಗೆ ಕಲ್ಲು ಹೊಡೆಯುತ್ತಿದ್ದ ಪುಂಡರ ಮೇಲೆ ಹದ್ದುಗಣ್ಣಿಡಿ.ಸ್ವಲ್ಪ ವ್ಯತ್ಯಾಸವಾದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಲಾಗಿದೆ.

     ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಲರ್ಟ್ ಮಾಡಿ.ಯಾರಾದರೂ ಹಿಂಸಾಚಾರ,ಗಲಭೆ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದರೆ ಅಂತವರು ಬದುಕಿನಲ್ಲಿ ಮರೆಯಲಾಗದಂತಹ ಪಾಠ ಕಲಿಸಬೇಕು ಎಂದು ಪೋಲೀಸರಿಗೆ ಸೂಚನೆ ನೀಡಲಾಗಿದೆ.

     ಹೀಗೆ ಒಂದೆಡೆ ಭಾರತ್ ಬಂದ್ ಕರೆಗೆ ಪ್ರತಿಪಕ್ಷಗಳು ವ್ಯಾಪಕ ತಯಾರಿ ಮಾಡಿಕೊಂಡಿದ್ದರೆ,ಮತ್ತೊಂದೆಡೆ ಆಡಳಿತ ಪಕ್ಷ ಅದನ್ನು ವಿಫಲಗೊಳಿಸಲು ಸರ್ವ ಯತ್ನ ನಡೆಸಿದೆ.ಬಂದ್ ಅನ್ನು ಯಶಸ್ವಿಗೊಳಿಸುವುದು ಪ್ರತಿಪಕ್ಷಗಳ ಸ್ವಪ್ರತಿಷ್ಟೆಯ ಪ್ರಶ್ನೆಯಾಗಿದ್ದು,ಅದನ್ನು ಯಶಸ್ವಿಯಾಗದಂತೆ ನೋಡಿಕೊಳ್ಳುವ ಮೂಲಕ ತನ್ನ ಮೇಲುಗೈ ಮೆರೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ನಿರ್ಧರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap