ಬೆಂಗಳೂರು
ಕಬ್ಬಿನ ಬಾಕಿ ಹಣ ಕೊಡಿಸಲು, ಸೂಕ್ತ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲವಾಗಿರುವುದು ರೈತ ಮಹಿಳೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವಮಾನ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಕಾರ್ಯಾಕತರು ರಾಜ್ಯಾದ್ಯಂತ ಬುಧವಾರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಉಡಾಫೆಯಿಂದ ವರ್ತಿಸುತ್ತಿರುವುದನ್ನು ಖಂಡಿಸಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದಿ ಎಂದು ಅಪಮಾನ ಮಾಡಿದ್ದಾರೆ. ಇದು ರಾಜ್ಯದ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ. ಹೀಗಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ರಾಜ್ಯದಾದ್ಯಂತ ಪ್ರತಿದಿನ ಹೋರಾಟ ಪ್ರತಿಭಟನೆಗಳನ್ನು ನಡೆಸುವಂತೆ ಮಹಿಳಾ ಬಿಜೆಪಿ ಕಾರ್ಯಕರ್ತೆಯರಿಗೆ ಕರೆ ನೀಡಿದರು.
ಅನ್ನದಾತ ರೈತರನ್ನು ಗೂಂಡಾಗಳು, ದರೋಡೆಕೋರರು ಎಂದು ಕರೆದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕು ಹೊಂದಿಲ್ಲ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಮನೆಗೆ ಕಳುಹಿಸುವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಗುಡುಗಿದರು.
ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿ ನಿರ್ಲಕ್ಷ್ಯ ರೈತರ ಸಾಲಮನ್ನಾ ಮಾಡುವಲ್ಲಿ ಎಡವಿಡುವ ಸರ್ಕಾರದ ವಿರುದ್ಧ ಡಿ. 10 ರಂದು 1 ಲಕ್ಷಕ್ಕೂ ಹೆಚ್ಚು ರೈತರನ್ನು ಬೆಳಗಾವಿಯ ಸುವರ್ಣ ಸೌಧದ ಮುಂದೆ ಸಮಾವೇಶಗೊಳಿಸಿ, ಹೋರಾಟ ತೀವ್ರ ಗೊಳಿಸುವ ಎಚ್ಚರಿಕೆ ನೀಡಿದರು.
ಕೇವಲ 38 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಬೆಂಬಲ ಪಡೆದು ದುರಾಹಂಕಾರದಿಂದ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವಾಗಿಯೇ ರಾಜೀನಾಮೆ ನೀಡುವವರೆಗೂ ರಾಜ್ಯದಾದ್ಯಂತ ನಿರಂತರ ಹೋರಾಟ ಬಿಜೆಪಿ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಆರು ತಿಂಗಳು ಕಳೆದರೂ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ. ಕಬ್ಬು ಬೆಳೆಗಾರರಿಗೆ ನ್ಯಾಯೋಚಿತ ಬೆಲೆ ಪ್ರಕಟಿಸಿಲ್ಲ. ವಿಧಾನಸೌಧದಲ್ಲಿ ರಾಜಕೀಯ ದೊಂಬರಾಟ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕುಟುಂಬಕ್ಕೆ ಕಪ್ಪು ಚುಕ್ಕೆ: ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಮಾತನಾಡಿ ರೈತರನ್ನು ಗೂಂಡಾಗಳು, ದರೋಡೆಕಾರರು ಎಂದು ಅವಹೇಳನ ಮಾಡಿರುವ ನಿಮ್ಮ ಮಾತುಗಳು ಇತಿಹಾಸದಲ್ಲಿ ನಿಮ್ಮ ಕುಟುಂಬಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ 38 ಸ್ಥಾನಗಳನ್ನು ಗೆದ್ದಿರುವ ನೀವು ವಿರೋಧ ಪಕ್ಷದಲ್ಲಿರಲು ನಾಲಾಯಕ್ ಎಂದು ಜನ ತೀರ್ಪುನೀಡಿದ್ದಾರೆ.ಆದರೆ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆಂದು ಎಂದು ದೂರಿದರು.
ರೈತರಲ್ಲಿ ಆತ್ಮಸ್ಥೈರ್ಯ ತುಂಬದೇ ಅವರನ್ನು ಅಪಮಾನಗೊಳಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕು ಇಲ್ಲ ಎಂದು ಹೇಳಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ತಾಜ್ ವೆಸ್ಟ್ ಎಂಡ್ ಅಲ್ಲಿ ಕುಳಿತು ಸರ್ಕಾರದ ನಿರ್ಧಾರಗಳನ್ನು ಕೈಗೊಳ್ಳುವುದೇ ಆದಲ್ಲಿ ನಿಮಗೆ ವಿಧಾನಸೌಧ ಏಕೆ ಬೇಕು? ಖಾಸಗಿತನ ಬೇಕಾದಲ್ಲಿ ನೀವು ಮುಖ್ಯಮಂತ್ರಿಯಾಗಿ ಏಕೆ ಇದ್ದೀರಿ ಎಂದು ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪರವರನ್ನು ಪಾಳೆಗಾರರು ಎಂದು ಕರೆಯುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇತಿಹಾಸವನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು ಎಂದರು.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿ, ಜೈಲು ವಾಸು ಅನುಭವಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತತ್ವ ಸಿದ್ಧಾಂತಗಳನ್ನು ಮರೆತು ತಮ್ಮ ಪಕ್ಷದ ಕಚೇರಿಗೆ ಜೆಪಿ ಭವನ ಎಂದು ಹೆಸರಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್, ಬೆಂಗಳೂರು ಬಿಜೆಪಿ ಮಹಾನಗರ ಘಟಕ ಅಧ್ಯಕ್ಷ ಪಿ.ಎನ್.ಸದಾಶಿವ, ಶಾಸಕ ಗರುಡಾಚಾರ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ