ಹಾನಗಲ್ಲ :
ಉತ್ತರ ಕರ್ನಾಟಕದ ನೀರಾವರಿ ಸೇರಿದಂತೆ ಯಾವುದೇ ಅಭಿವೃದ್ದಿಗೆ ನಿರ್ಲಕ್ಷ ತೋರುತ್ತಿರುವ ಪ್ರಸ್ತುತ ರಾಜ್ಯದ ಸಮ್ಮಿಶ್ರ ಸರಕಾರ ಪರೋಕ್ಷವಾಗಿ ರಾಜ್ಯವನ್ನು ಒಡೆಯಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಕಿಡಿಕಾರಿದರು.
ಶುಕ್ರವಾರ ಹಾನಗಲ್ಲಿನಲ್ಲಿ ತಾಲೂಕು ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗೆ ಕರ್ನಾಟಕವನ್ನು ಒಡೆಯುವ ಇಚ್ಛೆ ಇಲ್ಲ. ಆದರೆ ಸರಕಾರಗಳು ಉತ್ತರ ಕರ್ನಾಟಕದ ಅಭಿವೃದ್ದಿಯನ್ನು ನಿರ್ಲಕ್ಷಿಸಿರುವುದು ರಾಜ್ಯವನ್ನು ಎರಡು ಭಾಗಮಾಡುವ ಮಲತಾಯಿ ಧೋರಣೆಗೆ ಸರಕಾರ ಮುಂದಾಗಿರುವುದು ಸರಿಯಲ್ಲ. ನೀರಾವರಿ, ಶೈಕ್ಷಣಿಕ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾವಾಗಿದೆ. ರಾಜಕೀಯ ಕಾರಣಕ್ಕಾಗಿ ಉತ್ತರ ಕರ್ನಾಟಕದ ಶಾಸಕರು, ಸಂಸದರು ಈ ಭಾಗದ ಅಭಿವೃದ್ಧಿಗೆ ಹೋರಾಟ ಮಾಡುತ್ತಿಲ್ಲ. ನಾವು ಉತ್ತರ ಕರ್ನಾಟಕದ ಅಭಿವೃದ್ದಿಗಾಗಿಯೇ ಸಂಘಟಿತರಾಗುತ್ತಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಪರಮೇಶಪ್ಪ ಹಲಗೇರಿ ಮಾತನಾಡಿ, ಬ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಈ ರಾಜ್ಯದಲ್ಲಿ ಜನತೆಯ ಅಭಿವೃದ್ಧಿ ಹಗಲುಗನಸಾಗಿದೆ. ಈ ಭ್ರಷ್ಟ ಜನಪ್ರತಿನಿಧಿಗಳ ಕಾರಣದಿಂದಾಗಿಯೇ ಈ ಭಾಗದ ಅಭಿವೃದ್ಧಿಯಾಗುತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ದಕ್ಷಿಣ ಕರ್ನಾಟಕಕ್ಕೆ ಸಾವಿರ ಸಾವಿರ ಕೋಟಿ ಸುರಿಯುತ್ತಿರುವ ಸರಕಾರ ಉತ್ತರ ಕರ್ನಾಟಕದವರನ್ನು ಕಡೆಗಣಿಸುತ್ತಿರುವುದರಿಂದಲೆ ರಾಜ್ಯ ಒಡೆಯಲು ಹಲವರು ಧ್ವನಿ ಎತ್ತಿದ್ದಾರೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ರಾಜ್ಯ ಸಂಘಟನೆ ಮುಖಂಡರಾದ ಆನಂದಪ್ಪ ಹಾದಿಮನಿ, ಬಸವರಾಜ ಕೆಳಗಿನಮನಿ, ನಿಂಗನಗೌಡ್ರ ಬಂಕಗೌಡ್ರ, ಸಿದ್ದನಗೌಡ್ರ, ಕೃಷ್ಣಮೂರ್ತಿ ಲಮಾಣಿ, ಚಂದ್ರಪ್ಪ ಕಾಳಪ್ಪನವರ, ರವಿ ಗೊಡ್ಡೆಮ್ಮಿ, ವೆಂಕಟೇಶ ಹೊಸಮನಿ, ತಾಲೂಕು ಅಧ್ಯಕ್ಷ ಶಿವಕುಮಾರ ಭದ್ರಾವತಿ, ಸಿದ್ಲಿಂಗಪ್ಪ ಬೇಲೂರ ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ