ನೂತನ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಚಿಂತನೆ : ಬಸವರಾಜ ಬೊಮ್ಮಾಯಿ  

ಹಾವೇರಿ
 
    ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ತರಲು ನೂತನ ಸರ್ಕಾರ ಪ್ರಯತ್ನ ಆರಂಭಿಸಿದೆ ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 131 ನೇ ಜನ್ಮ ದಿನೋತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ  ಅವರು ಮಾತನಾಡಿದರು. 
     ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಗೊಂದಲಗಳಿಗೆ ಕೊನೆಹಾಡಿ ಕೌಶಲ್ಯಾಧಾರಿತ ಆಧುನಿಕ ಜ್ಞಾನದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಶಿಕ್ಷಕರು ನೆಮ್ಮದಿಯಿಂದ ವೃತ್ತಿ ನಿರ್ವಹಿಸುವ ರೀತಿಯಲ್ಲಿ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಈಗಾಗಲೇ ಶಿಕ್ಷಣ ತಜ್ಞರು ವಿವಿಧ ಸಂಘ ಸಂಸ್ಥೆಗಳೊಂದಿಗೆ  ನಮ್ಮ ಸರ್ಕಾರದ ಶಿಕ್ಷಣ ಸಚಿವರು ಚರ್ಚೆಯನ್ನು ಆರಂಭಿಸಿದ್ದಾರೆ  ಎಂದು ಹೇಳಿದರು.
 
    ಉತ್ತರ ಕರ್ನಾಟಕದ ಶಿಕ್ಷಣ ಸುಧಾರಿಸಬೇಕು. ವಿಶೇಷವಾಗಿ ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೋಸ್ಕರ ಸರ್ಕಾರದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ಚಿಂತನೆ ನಡೆಸುತ್ತಿದ್ದೇವೆ. ಶಿಕ್ಷಕರು ಆತ್ಮಾಭಿಮಾನ ಮತ್ತು ಗೌರವಾಭಿಮಾನದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸಲು ಸಭೆಯಲ್ಲಿ ಶಿಕ್ಷಣ ಅಧಿಕಾರಿಗಳೊಟ್ಟಿಗೆ ಸಭೆ ನಡಿಸಿ ಮಾತನಾಡಿದ್ದೇವೆ.
     ರಾಜ್ಯದಲ್ಲಿ ಶಿಕ್ಷಕರ ಕೆಲಸ ನಿರ್ವಹಿಸುವ ಜಾಗ ಸುಧಾರಣೆ,  ಸ್ಥಳ ಆಯ್ಕೆ ಪ್ರಕ್ರಿಯೆಗೆ ನಮ್ಮ ಪ್ರೋತ್ಸಾಹವಿದೆ. ಹೀಗಾಗಿ ಶೈಕ್ಷಣಿಕ ರಂಗದಲ್ಲಿ ನೂತನ ನೀತಿಯನ್ನು ಜಾರಿಗೆ ತರಲು ಚರ್ಚೆನಡೆಸಿದ್ದೇವೆ ಎಂದು ಅವರು ಹೇಳಿದರು.
      ಶಿಕ್ಷಕರಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಶಿಕ್ಷಕರು ಮಕ್ಕಳನ್ನು ಅಕ್ಷರ ಜ್ಞಾನದತ್ತ ಕೊಂಡ್ಯೊಯ್ದು ಜ್ಞಾನ ಸಂಕೋಲೆಯಲ್ಲಿ ತೊಡಗಿಸಿ ಸುಶಿಕ್ಷಿತರನ್ನಾಗಿ ಮಾಡುತ್ತಾರೆ. 21 ನೇ ಶತಮಾನವು ಜ್ಞಾನ ಯುಗವಾಗಿದ್ದು ಜ್ಞಾನವಿದ್ದವರು ಇಲ್ಲಿ ಬದುಕಬಲ್ಲರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಸ್ಪರ್ಧೆಗಾಗಿ ಬೆಳಸುವುದು ಶಿಕ್ಷಕರ ಕರ್ತವ್ಯವಾಗಿದೆ. ತಂತ್ರಜ್ಞಾನ, ತಂತ್ರಾಂಶ ಪ್ರೇರಿತ ಆಧುನಿಕ ಶಿಕ್ಷಣ ಕಲಿಕಾ ಕ್ರಮ ಎಲ್ಲ ಮಕ್ಕಳಿಗೂ ದೊರಕಬೇಕು. ಶಾಲಾ ಹಂತದಲ್ಲೇ ಕೌಶಲ್ಯಾಧಾರಿತ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕರಾದ ನೆಹರು ಓಲೇಕಾರ ಅವರು ಶಿಕ್ಷಕರ ಶ್ರಮ ಕರ್ತವ್ಯ ಹೆಚ್ಚಾದಾಗ ಉತ್ತಮ ಫಲಿತಾಂಶ ಬರುತ್ತದೆ. ಇಂತಹ ಸಾಧನೆಯು ಶಿಕ್ಷಕರನ್ನು ಸನ್ಮಾನದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು. 
     ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲೆಯ 14 ಶಿಕ್ಷಕರಿಗೆ ಹಾಗೂ ಪ್ರೌಢ ಶಾಲೆಯ 7 ಶಿಕ್ಷಕರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು. ನಿವೃತ್ತ ಮತ್ತು ಅಕಾಲಿಕ ಮರಣ ಹೊಂದಿದ ಶಿಕ್ಷಕರಿಗೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ಜಿಲ್ಲಾ ಶಿಕ್ಷಕರ ಸಂಘದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ತಾಲೂಕಾ ಶಿಕ್ಷಕರ ಸಂಘದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ವಿವಿಧ ಶಾಲೆಯ ದೈಹಿಕ ಶಿಕ್ಷಕರಿಗೆ  ಸನ್ಮಾನಿಸಲಾಯಿತು. 
   2018-19ನೇ ಸಾಲಿನ ನಲಿ-ಕಲಿ ಶಾಲೆಯ ಅತ್ಯತ್ತಮ ನಲಿ-ಕಲಿ ಶಿಕ್ಷಕಿ ಪ್ರಶಸ್ತಿಯನ್ನು ಮೂವರು ಶಿಕ್ಷಕಿಯರಿಗೆ ವಿತರಿಸಲಾಯಿತು. ರಾಜ್ಯ ಪ್ರಶಸ್ತಿ ಪಡೆದ ಎಸ್ ಹನುಮಂತಪ್ಪ ಇವರಿಗೆ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ವಿತರಿಸಲಾಯಿತು. ಸರಿಗಮಪ ಸ್ಪರ್ಧಿಯಾದ ಮೇವುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ರುಬೀನಾ ನದಾಫ ಇವರಿಗೆ 2.50 ಲಕ್ಷ ರೂ. ಚೆಕ್ ವಿತರಿಸಿ ಸನ್ಮಾನಿಸಲಾಯಿತು. 
 
     ಕಾರ್ಯಕ್ರಮದಲ್ಲಿ ರೋಣ ತಾಲೂಕಿನ ಹಿರೇಹಾಳದ ನಿವೃತ್ತ ಪ್ರೌಢಶಾಲಾ ಶಿಕ್ಷಕರು ಹಾಗೂ ಆಕಾಶವಾಣಿ ಕಲಾವಿದ ಚಂದ್ರಶೇಖರ ವಡಿಗೇರಿ ಉಪನ್ಯಾಸ ನೀಡಿದರು. ವಿಧಾನಸಭೆಯ ಶಾಸಕ ನೆಹರು ಓಲೇಕಾರ ಇವರಿಗೆ ಶಿಕ್ಷಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಪೂರೈಸಲು ಮನವಿಯನ್ನು ಸಲ್ಲಿಸಲಾಯಿತು.
     ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಎಸ್.ಕೆ.ಕರಿಯಣ್ಣನವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಜಿ.ಪಂ. ಅಧ್ಯಕ್ಷರು ರಮೇಶ ದುಗ್ಗತ್ತಿ,  ಜಿ.ಪಂ.ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ತಾಲೂಕಾ ಪಂಚಾಯ್ತಿಯ ಅಧ್ಯಕ್ಷ ಕರಿಯಪ್ಪ ಉಂಡಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಭಗವಂತಗೌಡ್ರ, ಡಯಟ್‍ನ ಉಪನಿರ್ದೇಶಕ ಬಸವಲಿಂಗಪ್ಪ ಜಿ.ಎಂ, ಶಿಕ್ಷಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. 

Recent Articles

spot_img

Related Stories

Share via
Copy link