ಕೊರೋನಾ ಸಮಯ ಸರ್ಕಾರ ರೈತರನ್ನು ಗಾಣದಲ್ಲಿ ಹಾಕಿ ಅರೆದಿದೆ : ಡಿ ಕೆ ಶಿ

ಬೆಂಗಳೂರು

    ಕೇಂದ್ರ ಮತ್ತು ರಾಜ್ಯಗಳ ರೈತವಿರೋಧಿ ಕಾಯಿದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕರ್ನಾಟಕದಿಂದಲೇ ಈ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮುಂದಿನ ತಿಂಗಳು ಈ ಹೋರಾಟದಲ್ಲಿ ಭಾಗವಹಿಸಲು ಎಐಸಿಸಿ ಯುವನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಅವರು ಕೆಪಿಸಿಸಿ ವತಿಯಿಂದ ಶನಿವಾರ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರೈತ ಧ್ವನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಇಡೀ ವಿಶ್ವದಲ್ಲಿ ರೈತರಿಗೆ ಯಾವುದೇ ಜಾತಿ, ಧರ್ಮ ಇಲ್ಲ. ಈ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವವನು ಅನ್ನದಾತ. ಈ ದೇಶದ ಭೂಮಿ ಕಾಪಾಡಿಕೊಂಡು ಬಂದ ರೈತನನ್ನು, ಮಣ್ಣಿನ ಮಕ್ಕಳನ್ನು ಸ್ಮರಿಸಲು ಕಾಂಗ್ರೆಸ್ ನಾಯಕರು ಇಲ್ಲಿ ಸೇರಿದ್ದೇವೆ. ಕಾಂಗ್ರೆಸ್ ರಾಜಕೀಯ ಪಕ್ಷವೇ ಆಗಿದ್ದರೂ, ಇಲ್ಲಿ ಪಕ್ಷದ ಬಾವುಟ ಹಾಕಿಕೊಂಡು ಈ ಕಾರ್ಯಕ್ರಮ ಮಾಡುತ್ತಿಲ್ಲ. ಈ ತ್ರಿವರ್ಣ ಧ್ವಜ ದೇಶದ ಬಾವುಟ. ಇದಕ್ಕೆ ಒಂದು ಇತಿಹಾಸ ಇದೆ. ಆದರೆ ಸ್ವಾಭಿಮಾನ, ಶಕ್ತಿ ಇರುವುದು ಈ ಹಸಿರು ಬಾವುಟದಲ್ಲಿ. ಈ ರೈತರನ್ನು ಉಳಿಸಲು ಹೋರಾಟ ಮಾಡುತ್ತಿರುವುದಾಗಿ ಹೇಳಿದರು.

    ಇದು ಭಾಷಣ ಮಾಡುವ ಸಂದರ್ಭ ಅಲ್ಲ, ಚರ್ಚೆ ಮಾಡುವ ಕಾಲ. ಈ ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಲಂಚ ಸಿಗಲ್ಲ, ನಿವೃತ್ತಿ ಇಲ್ಲ. ಈ ರೈತರನ್ನು ನಾವು ಕಾಪಾಡಬೇಕು. ದೇಶದಲ್ಲಿ ಕಾಂಗ್ರೆಸ್ 60-70 ವರ್ಷಗಳ ಕಾಲ ಅಧಿಕಾರ ಮಾಡಿದೆ. ನಾವು ಎಲ್ಲವನ್ನೂ ಸರಿ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಸಾಕಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ. ಕಾಲಕಾಲಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದೇವೆ. ಜನರ ಧ್ವನಿ ಮತ್ತು ರೈತರ ಧ್ವನಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕಾನೂನುಗಳನ್ನು ತಿದ್ದುಪಡಿ ಮಾಡಿದ್ದೇವೆ.

    ದೆಹಲಿಯಲ್ಲಿರುವ ಕೆಲವು ಶ್ರೀಮಂತರು ಸೇರಿದಂತೆ ದೇಶದಲ್ಲಿ ಹೆಚ್ಚೆಂದರೆ 100 ಮಂದಿ ಉದ್ಯಮಿಗಳು ಮಾತ್ರ ನೆಮ್ಮದಿಯಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜನ ನೊಂದು ಬೇಯುತ್ತಿದ್ದಾರೆ. ಜನ ತಮ್ಮ ಮನೆಗೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಕೊರೋನಾ ಸಮಯದಲ್ಲಿ ರೈತರ ಬದುಕು ಹಿಂಡಿ, ಹಿಪ್ಪೆಯಾಯಿತು. ರೈತರನ್ನು ಗಾಣದಲ್ಲಿ ಹಾಕಿ ಅರೆದಿದ್ದಾರೆ. ರೈತರು ಕ್ಯಾರೆಟ್ ಅನ್ನು ಕೆ.ಜಿಗೆ 2 ರೂಪಾಯಿ, ದ್ರಾಕ್ಷಿಯನ್ನು 5 ರೂಪಾಯಿಗೆ ತೆಗೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಸರ್ಕಾರ ಒಬ್ಬ ರೈತನಿಗೂ ಸಹಾಯ ಮಾಡಲಿಲ್ಲ. ಆತನ ನಷ್ಟ ಎಷ್ಟು ಎಂದು ತಿಳಿಯಲಿಲ್ಲ. ಆತನಿಗೆ ಬೆಂಬಲ ಬೆಲೆ ನೀಡಲಿಲ್ಲ ಎಂದು ಆರೋಪಿಸಿದರು.

   ಯಡಿಯೂರಪ್ಪ ಹಸಿರು ಟವಲ್ ಹಾಕಿಕೊಂಡು ರೈತರನ್ನು ಉಳಿಸುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ರೈತರ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಸರ್ಕಾರ ಏಕೆ ಇರಬೇಕು? ಈ ಸರ್ಕಾರಕ್ಕೆ ರೈತ ಸಮುದಾಯ ಏಕೆ ಬೆಂಬಲವಾಗಿ ನಿಲ್ಲಬೇಕು? ಸರ್ಕಾರ ಕಾರ್ಯಕ್ರಮಗಳನ್ನು ಘೋಷಣೆ ಮಾಡಿತಾದರೂ, ನುಡಿದಂತೆ ನಡೆಯಲು ಸಾಧ್ಯವಾಗಲಿಲ್ಲ. ಬೆಂಬಲ ಬೆಲೆ ನೀಡಲಿಲ್ಲ ಅಂದ ಮೇಲೆ ಈ ಸರ್ಕಾರ ಬೇಡ ಎಂದರು.

   ಮಂಡ್ಯ ಕಾರ್ಖಾನೆಯನ್ನು ಬಂಡವಾಳಶಾಹಿಗಳಿಗೆ ಮಾರಿದ್ದಾರೆ. ಈ ಕಾರ್ಖಾನೆಯನ್ನು ನಾವು ಉಳಿಸಿಕೊಂಡು ಬಂದಿದ್ದೆವು. ಸಿದ್ದರಾಮಯ್ಯ ಅವರು ಈ ಕಾರ್ಖಾನೆ ಉಳಿಸಲು ಕೋಟ್ಯಂತರ ರೂಪಾಯಿ ಕೊಟ್ಟಿದ್ದರು. ಖಾಸಗಿಯವರು ಕಾರ್ಖಾನೆ ನಡೆಸಬಹುದಾದರೆ ಸರ್ಕಾರಕ್ಕೆ ಏಕೆ ಆಗಲ್ಲ? ಮಂಡ್ಯದಲ್ಲಿ ಯಾವುದೇ ಶಾಸಕರನ್ನು ಕೊಡಲಿಲ್ಲ, ಬಿಜೆಪಿಗೆ ಬೆಂಬಲ ನೀಡಲಿಲ್ಲ ಎಂದು ಮಂಡ್ಯದ ಆಸ್ತಿಯನ್ನು ಪಕ್ಷದ ಕಾರ್ಯಕರ್ತರಿಗೆ ಮಾರಿದ್ದಾರೆ.

    ರೈತರ ಧ್ವನಿಯನ್ನು ರಾಷ್ಟ್ರಕ್ಕೆ ಕಳುಹಿಸಲು ಈ ಕಾರ್ಯಕ್ರಮವನ್ನು ಇಲ್ಲಿ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ನಂತರ ನಿಮ್ಮ ಸಮಸ್ಯೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮುಟ್ಟಿಸಲು ಸೋನಿಯಾ ಗಾಂಧಿ ಅವರು ಸಹಿ ಸಂಗ್ರಹ ಆಂದೋಲನ ನಡೆಸುತ್ತಿದ್ದು, ಸಹಿ ಹಾಕುವ ಮೂಲಕ ಇದರಲ್ಲಿ ಭಾಗವಹಿಸಬೇಕು. ಈ ತಿಂಗಳು 31 ರಂದು ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಈ ಕಾಯ್ದೆಗಳಿಂದ ಜನರಿಗೆ ಆಗುವ ಸಮಸ್ಯೆ ಕುರಿತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಎಂದರು.

    ರಾಜ್ಯದಲ್ಲಿ ವಿಧಾನ ಪರಿಷತ್ ಸ್ಥಾಪನೆಯಾದ ಮೇಲೆ ಮೊದಲ ಬಾರಿಗೆ ಕಾಂಗ್ರೆಸ್ ಮೇಲ್ಮನೆಯಲ್ಲಿ ಮೂರು ಮಸೂದೆಗಳನ್ನು ಅಂಗೀಕಾರ ಮಾಡದೆ ವಾಪಸ್ ಕಳುಹಿಸಿದೆ. ಜನರ ಹಿತಾಸಕ್ತಿಗಾಗಿ ನಮ್ಮ ವಿಧಾನಪರಿಷತ್ ನಾಯಕರು ಮಾಡಿದ ಈ ಕಾರ್ಯಕ್ಕೆ ನಾನು ನಮಸ್ಕರಿಸುತ್ತೇನೆ. ಇದು ರೈತರಿಗೆ ಸಂಬಂಧಿಸಿದ ಮಸೂದೆ. ಹೀಗಾಗಿ ನಿಮ್ಮ ಧ್ವನಿಯಾಗಿ ನಮ್ಮ ನಾಯಕರು ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿ, ಉಳುವವನಿಗೆ ಭೂಮಿಯನ್ನು ಕೊಟ್ಟಿದೆ. ಆದರೆ ಈ ಸರ್ಕಾರ ಏನು ಮಾಡುತ್ತಿದೆ? ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಲು ಅವಕಾಶ ಕೊಟ್ಟಿದ್ದಾರೆ. ಆ ಮೂಲಕ ಯಡಿಯೂರಪ್ಪ ಹಾಗೂ ಅಶೋಕ್ ಅವರು ಸೇರಿ ಇಡೀ ರಾಜ್ಯ ಮಾರಲು ಹೊರಟಿದ್ದಾರೆ. ಇದರ ವಿರುದ್ಧ ನಿಮ್ಮ ಧ್ವನಿ ಇರಬೇಕಾಗಿದೆ. ನಿಮ್ಮ ಧ್ವನಿ ರಾಷ್ಟ್ರಕ್ಕೆ ಮುಟ್ಟಬೇಕಿದೆ.

     ನಮ್ಮ ನಾಯಕರಾದ ರಾಹುಲ್ ಗಾಂಧಿ ನಿಮ್ಮ ಹೋರಾಟದಲ್ಲಿ ಕೈ ಜೋಡಿಸಲು ಮುಂದಿನ ತಿಂಗಳು ಇಲ್ಲಿಗೆ ಆಗಮಿಸಲಿದ್ದಾರೆ. ಅವರು ಬರುವ ದಿನಾಂಕವನ್ನು ನಾವು ಸದ್ಯದಲ್ಲೇ ಘೋಷಿಸುತ್ತೇವೆ. ನೀವು ಅವರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಡಿಕೆಶಿ ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap