ಹೂವಿನಹಡಗಲಿ

ನನ್ನ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದೆ, ಸರ್ಕಾರ ಕೂಡಲೇ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿ, ಸಮರ್ಪಕ ಪರಿಹಾರ ನೀಡಬೇಕೆಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಆಗ್ರಹಿಸಿದರು.
ಅವರು ತಾಲೂಕಿನ ನೆರೆ ಹಾವಳಿಗೆ ತುತ್ತಾದ ಅಲ್ಲಿಪುರ, ಮಾಗಳ, ಅಂಗೂರು, ಮಕರಬ್ಬಿ, ಬ್ಯಾಲಹುಣ್ಸಿ, ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿನೀಡಿ, ಪರಿಶೀಲಿಸಿದರು. ನೆರೆ ಹಾವಳಿಯಿಂದ ಹಾನಿಗೊಳಗಾದ ಜಮೀನುಗಳಲ್ಲಿನ ಬೆಳೆ ಮತ್ತು ಬಿದ್ದ ಮನೆಗಳು ಸೇರಿದಂತೆ ಒಟ್ಟಾರೆ ಪ್ರಕೃತಿ ವಿಕೋಪದಿಂದ ಆದಂತಹ ಹಾನಿಯ ಕುರಿತು ಸಮರ್ಪಕವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಹಶೀಲ್ದಾರ ರಾಘವೇಂದ್ರರಾವ್‍ರವರಿಗೆ ಸೂಚಿಸಲಾಗಿದೆ ಎಂದರು.
ತುಂಗಭದ್ರಾ ನದಿ ತೀರದ ಗ್ರಾಮದ ಜನತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸುರಕ್ಷತಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಪರಿಹಾರದ ಚೆಕ್ಕನ್ನು ವಿತರಿಸಿದ್ದು, ಅವರಿಗೆ ಮನೆ ನಿರ್ಮಿಸಿ, ಕೊಡಲಾಗುವುದು ಎಂದರು.
ಇನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ನಿರ್ಮಾಣದಲ್ಲಿ ಸ್ಥಳಾಂತರಗೊಂಡಿರುವ ಅಲ್ಲಿಪುರ ಗ್ರಾಮದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿರುವುದು ಗಮನಕ್ಕೆ ಬಂದಿದ್ದು, ಅಲ್ಲಿನ ಜನತೆಗೆ ಬಸವವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಸ್ಥಳಾಂತರಗೊಂಡ ಅಲ್ಲಿಪುರ ಗ್ರಾಮದ ನೂತನ ಗ್ರಾಮದಲ್ಲಿ ಸರ್ಕಾರ 60 ಮನೆಗಳನ್ನು ಮಂಜೂರು ಮಾಡಿ ಈಗಾಗಲೇ ನಿರ್ಮಿಸಿಕೊಡಲಾಗಿದೆ, ಇನ್ನುಳಿದ ಅರ್ಹ ಫಲಾನುಭವಿಗಳಿಗೆ ಅಗತ್ಯಕ್ಕೆ ತಕ್ಕಂತೆ ಮನೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದಾಗಿ ಭರವಸೆ ನೀಡಿದರು.
ಪ್ರಕೃತಿ ವಿಕೋಪದ ಅಡಿಯಲ್ಲಿ ಮುಳುಗಡೆಗೊಂಡಂತಹ ರೈತರ ಜಮೀನಿನ ಬೆಳೆಗಳಿಗೆ ವಿಶೇಷ ಪ್ರಕರಣದ ಅಡಿಯಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.ಸಂದರ್ಭದಲ್ಲಿ ತಹಶೀಲ್ದಾರ ರಾಘವೇಂದ್ರರಾವ್, ಇ.ಓ.ಸೋಮಶೇಖರ, ಬ್ಲಾಕ್ ಕಾಂಗೈ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಅಟವಾಳಗಿ ಕೊಟ್ರೇಶ, ಜಿ.ವಸಂತ, ಪುರಸಭೆ ಸದಸ್ಯರಾದ ವಾರದ ಗೌಸ್‍ಮೊಹಿದ್ದೀನ್, ಜ್ಯೋತಿ ಮಲ್ಲಣ್ಣ, ತಾ.ಪಂ.ಸದಸ್ಯ ಸೋಗಿ ಹಾಲೇಶ, ಬಿ.ಹನುಮಂತಪ್ಪ, ಕೆ.ಪತ್ರೇಶ, ಬ್ಯಾಲಹುಣ್ಸಿ ಬಸವನಗೌಡ, ಚರಣ್ ಗುಂಡಿ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
