ದಾವಣಗೆರೆ
ನಮ್ಮದು 20 ಹಸುಗಳಿದೆ, 15 ಕಿಲೋಮೀಟರ್‍ನಿಂದ ಕೊಣಚಗಲ್ ಬಳಿಯ ಗೋಶಾಲೆಗೆ ಬಂದಿದ್ದೇವೆ. ಆದರೆ, ನಮಗೆ ಮೂರರಿಂದ ಐದು ಕೆಜಿ ಮಾತ್ರ ಮೇವು ಕೊಡುತ್ತಾರೆ. ಇದು ಸಾಕಾಗುತ್ತಿಲ್ಲ… ರಾತ್ರಿ ವೇಳೆ ಇಲ್ಲಿ ಯಾರು ಇರೋದಿಲ್ಲ… ತಮಗೆ ಬೇಕಾದವರಿಗೆ ರಾತ್ರಿ ವೇಳೆ ಮೇವು ಕೊಡುತ್ತಾರೆ.. ಇಲ್ಲಿ ಬೆಳಗ್ಗೆಯಿಂದ ಸಂಜೆಯವರಿಗೆ ಕಾದರೂ ಊಟ ಕೊಡೋ ದಿಲ್ಲ.. ಹಸುಗಳನ್ನು ಕಸಾಯಿ ಖಾನೆಗೆ ಕಳುಹಿಸಲು ನಿರ್ಧಾರ ಮಾಡಿದ್ದೇವೆ….
ಹೀಗೆ ರೈತರು ತಮ್ಮ ಅಳಲನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ ಬಳಿ ತೋಡಿಕೊಂಡರು. ಪ್ರತಿ ದಿನ 12 ಗಂಟೆಗೆ ಮೇವು ಕೊಡುವುದನ್ನು ನಿಲ್ಲಿಸುತ್ತಾರೆ. ಇವತ್ತು ಸಚಿವರು ಬಂದ್ದಿದ್ದಾರೆ ಎಂದು 7 ಲಾರಿ ಲೋಡ್ ಮೇವನ್ನು ತರಿಸಿದ್ದಾರೆ. ಪ್ರತಿ ದಿನ ಇಲ್ಲಿಗೆ ಮೂರರಿಂದ ನಾಲ್ಕು ಲೋಡ್ ಮೇವು ಮಾತ್ರ ಬರುತ್ತದೆ. ದಿನದಿಂದ ದಿನಕ್ಕೆ ಹಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗ 3500 ಹಸುಗಳಿದ್ದು, ಇವುಗಳಿಗೆ ಮೇವು ಸಾಕಾಗುತ್ತಿಲ್ಲ ಎಂದು ಆರೋಪಿಸಿದರು.
ಕೆಲವರು ಒಂದೆರಡು ಹಸುಗಳನ್ನು ಸಾಕಿದರೆ, ಇನ್ನೂ ಕೆಲವರು 10ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದಾರೆ. ಹೆಚ್ಚು ಮೇವು ಕೊಡಿ ಎಂದರೆ ನಿಮಗ್ಯಾರು ಹೇಳಿದ್ದು, ಇಷ್ಟೊಂದು ಹಸುಗಳನ್ನು ಸಾಕಲು ಎನ್ನುತ್ತಾರೆ. ಅದರಲ್ಲೂ ಸರಕಾರದಿಂದ ಉಚಿತವಾಗಿ ಮೇವು ನೀಡುತಿದ್ದು, ನೀವು ಈ ಮೇವನ್ನು ಮಾರಾಟ ಮಾಡುತ್ತೀರೀ ಎಂಬುದಾಗಿ ದಬಾಯಿಸುತ್ತಾರೆಂದು ಗೋಶಾಲೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವ ಎಸ್.ಆರ್.ಶ್ರೀನಿವಾಸ ಮಾತನಾಡಿ, ಬರ ಪೀಡಿತ ಜಗಳೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪ್ರಸ್ತುತ ಮಡ್ರಳ್ಳಿ ಮತ್ತು ಕೊಣಚಗಲ್‍ನಲ್ಲಿ ಎರಡು ಗೋಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿನ ಸ್ಥಳೀಯರ ಹಾಗೂ ಜಗಳೂರು ಶಾಸಕರ ಬೇಡಿಕೆಯಂತೆ ನಾಳೆಯಿಂದ ಹಿರೇಮಲ್ಲನ ಹೊಳೆಯಲ್ಲಿ ಗೋಶಾಲೆ ಆರಂಭಿಸಲಾಗುವುದು. ನಂತರ ಕೊಡದಗುಡ್ಡ ಅಥವಾ ಸ್ಥಳೀಯರಿಗೆ ಅನುಕೂಲಕರವಾಗುವಂತಹ ಸ್ಥಳದಲ್ಲಿ ಮತ್ತೊಂದು ಗೋಶಾಲೆ ಆರಂಭಿಸಿ ಮೇವು, ನೀರು ನೀಡಲಾಗುವುದು ಎಂದರು.
ಸರಕಾರ ಮತ್ತು ಅಧಿಕಾರಿಗಳು ಮೇವನ್ನು ಒದಗಿಸುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಡ್ಡರಹಳ್ಳಿಯಲ್ಲಿ ಪ್ರತಿದಿನ 3 ಸಾವಿರ ಮತ್ತು ಇಲ್ಲಿ 1800 ರಿಂದ 2000 ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಗೋಕಟ್ಟೆಗಳಲ್ಲಿ ಜಾನುವಾರುಗಳಿಗೆ ನೀರು ಸಹ ಪೂರೈಸಲಾಗುತ್ತಿದೆ ಎಂದರು.
ಕೊಣಚಗಲ್‍ನಲ್ಲಿ ರೈತರಿಗೆ ರಾತ್ರಿ ಊಟ ನೀಡಲಾಗುತ್ತಿದೆ. ಮಡ್ಡರಹಳ್ಳಿಯಲ್ಲಿಯೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಗಮನಕ್ಕೆ ಬಂದಂತಹ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಬರದ ನಿರ್ವಹಣೆ ಹಿನ್ನೆಲೆಯ ಇಂತಹ ಕಾರ್ಯಕದಲ್ಲಿ ಸಣ್ಣಪುಟ್ಟ ದೋಷಗಳು ಇರುತ್ತವೆ. ಅವುಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.
ಇಲ್ಲಿಗೆ ಪ್ರತಿ ದಿನ ಸಿಂಧನೂರು ಮತ್ತು ರಾಯಚೂರು ಕಡೆಯಿಂದ 6-7 ಲೋಡ್ ಹಸಿ ಜೋಳದ ಸಪ್ಪಿಯನ್ನು ತರಿಸಿಕೊಂಡು ಒಬ್ಬ ರೈತನಿಗೆ ಉಚಿತ 7 ರಿಂದ 8 ಕೆ ಜಿ ಮೇವನ್ನು ನೀಡಲಾಗುತ್ತಿದೆ. ಇದು ಹಸಿ ಮೇವಾಗಿರುವುದರಿಂದ ದಾಸ್ತಾನು ಇಡುವುದಿಲ್ಲ. ಈ ಭಾಗದ ಜಾನುವಾರುಗಳಿಗೆ ಭತ್ತದ ಹುಲ್ಲಿಗಿಂತ ಇದೇ ಸೂಕ್ತವಾಗಿದೆ ಎಂದರು.
ಈ ವೇಳೆ ಜಗಳೂರು ಕ್ಷೇತ್ರದ ಶಾಸಕ ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿ ಪಂ ಸಿಇಓ ಹೆಚ್.ಬಸವರಾಜೇಂದ್ರ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಆರ್, ದಾವಣಗೆರೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯಕ್, ಜಗಳೂರು ಇಓ ಜಾನಕಿರಾಂ, ತಹಶೀಲ್ದಾರ್ ತಿಮ್ಮಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.