ಕುಣಿಗಲ್
ಪಟ್ಟಣದ ಐತಿಹಾಸಿಕ ಹಾಗೂ ಸಂಪ್ರದಾಯಬದ್ದವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮದೇವತೆಗಳಾದ ಶ್ರೀ ಕೊಲ್ಲಾಪುರದಮ್ಮ, ಶ್ರೀ ಕೋಟೆಮಾರಮ್ಮ, ವಾನಂಬಾಡಿ ಶ್ರೀ ಆದಿಪರಾಶಕ್ತಿ, ಅಂಬೇಡ್ಕರ್ ನಗರದ ಶ್ರೀ ದುರ್ಗಮ್ಮ, ಶ್ರೀ ಕೊಲ್ಲಾಪುರದಮ್ಮ ಸೇರಿದಂತೆ ವಿವಿಧ ದೇವತೆಗಳ ಅದ್ದೂರಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರತಿವರ್ಷದಂತೆ ಈ ಬಾರಿಯೂ ಸಹಸ್ರಾರು ಭಕ್ತರು ಮಂಗಳವಾರ- ಬುಧವಾರ ಎರಡು ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅಗ್ನಿಕೊಂಡ ಸೇರಿದಂತೆ ವಿವಿಧ ರೀತಿಯ ಪೂಜಾ ಕಾರ್ಯಗಳನ್ನ ಅದ್ದೂರಿಯಾಗಿ ಆಚರಿಸಿದರು.
ಆಯಾಯ ಭಾಗದ ದೇವತೆಗಳ ಭಕ್ತರು ಮತ್ತು ಆಡಳಿತ ಮಂಡಳಿಯವರು ಮಂಗಳವಾರ ಮುಂಜಾನೆ ಐತಿಹಾಸಿಕ ಸುಪ್ರಸಿದ್ದ ಶ್ರೀ ಕೊಲ್ಲಾಪುರದಮ್ಮ ದೇವರನ್ನ ಹೊಳೆಗೆ ಕರೆದೊಯ್ದು ಪುಣ್ಯಾಹವನ್ನು ಮುಗಿಸಿಕೊಂಡು ನಡೆಮುಡಿಯೊಂದಿಗೆ ವಿವಿಧ ಸಾಂಸ್ಕøತಿಕ ಕಲಾ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಭಕ್ತ ಮಹಾಜನರ ಜಯಘೋಷದೊಂದಿಗೆ ಕರೆತಂದರು.
ಅದೇ ರೀತಿ ಶ್ರೀ ಆದಿಪರಾಶಕ್ತಿ, ಶ್ರೀ ದುರ್ಗಾದೇವಿ, ಶ್ರೀ ಕೋಟೆಮಾರಮ್ಮ, ಗ್ರಾಮದೇವತೆ ಸೇರಿದಂತೆ ವಿವಿಧ ಭಾಗದ ಭಕ್ತರು ತಮ್ಮ ತಮ್ಮ ದೇವತೆಗಳನ್ನ ಹೊಳೆಯಲ್ಲಿ ಪುಣ್ಯಾಹದೊಂದಿಗೆ ದೇವಾಲಯಗಳಿಗೆ ಕಲಶ ನಡೆಮುಡಿಯ ಮೂಲಕ ಮಂಗಳವಾಧ್ಯದೊಂದಿಗೆ ಕರೆತಂದು ಮಹಾಮಂಗಳಾರತಿಯನ್ನ ನೆರವೇರಿಸಿ ಭಕ್ತರು ತಂದಿದ್ದ ತಂಬಿಟ್ಟು ಆರತಿಯನ್ನ ನೆರವೇರಿಸಿದರು.
ನಂತರ ಆಯಾಯ ಭಾಗದಲ್ಲಿ ಎಚ್ಚರಿಕೆಯ ಕ್ರಮದೊಂದಿಗೆ ಭಕ್ತರು ಸಂಪ್ರದಾಯದಂತೆ ಅಗ್ನಿಕೊಂಡೋತ್ಸವವನ್ನು ನೆರವೇರಿಸಿದರು. ದೇವತೆಗಳಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ ನಂತರ ಇಲ್ಲಿನ ಭಕ್ತ ಸಮೂಹ ತಮ್ಮ ನೆಂಟರಿಸ್ಟರು ಸ್ನೇಹಿತರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಸಿಹಿ ಹಾಗೂ ಕಾರದ ಅಡುಗೆಯನ್ನ ತಮ್ಮ ಶಕ್ತಾನುಸಾರ ಮಾಡಿಸಿ ಹೃದಯ ಪೂರ್ವಕವಾಗಿ ಉಣಬಡಿಸುವ ಸಂಪ್ರದಾಯವಂತೂ ಬಾರಿ ಮೆಚ್ಚಿಗೆಗೆ ಪಾತ್ರವಾಗಿದೆ.
ಇಂದಿನ ದಿನಮಾನದಲ್ಲಿಯೂ ಭಕ್ತರು ದುಬಾರಿ ಬೆಲೆಯನ್ನ ಕೊಟ್ಟು ಮಾಂಸಾಹಾರವನ್ನ ಖರೀದಿಸಿ ತಮ್ಮ ಬಂಧು ಬಳಗವನ್ನ ಕರೆಸಿ ಅವರೆಲ್ಲರಿಗೂ ಭಾರಿ ಭೂರಿಭೋಜನ ಬಡಿಸುವ ಸಂಪ್ರದಾಯ ಈ ಭಾಗದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವುದು ಅಚ್ಚರಿಯ ಸಂಗತಿಯಾಗಿದ್ದು, ವಿಶಿಷ್ಠ ಸಂಪ್ರದಾಯಗಳ ಆಚರಣೆಯೊಂದಿಗೆ ಬೇಸಿಗೆಯ ಕಾಲದಲ್ಲಿ ಬರುವ ಹಬ್ಬಗಳನ್ನ, ಜಾತ್ರೆಗಳನ್ನ ನಡೆಸಿಕೊಂಡು ಬರುವ ಮೂಲಕ ತಮ್ಮ ಹೃದಯವೈಶಾಲ್ಯವನ್ನ ಮೆರೆಯುತ್ತಿರುವುದು ಅಚ್ಚರಿ ಮೂಡಿಸಿದೆ.