ಹಗರಿಬೊಮ್ಮನಹಳ್ಳಿ:
ತಾಲೂಕಿನ ಮರಬ್ಬಿಹಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಖಾಸಗಿ ಹೊಲಗಳಿಗೆ ನೀರು ಸರಬರಾಜು ಖಂಡಿಸಿ ಸಾರ್ವಜನಿಕರು ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ಜರುಗಿತು.
ಪ್ರತಿಭಟನೆ ನಡೆಯುತ್ತಿದ್ದ ಕಚೇರಿಗೆ ಕರ್ತವ್ಯಕ್ಕೆ ಬಂದ ಪಿಡಿಓ ರತ್ನಮ್ಮ ಮತ್ತು ಸಿಬ್ಬಂದಿಯವರನ್ನು ತಡೆದು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, 2500ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಒಂದೊಂದು ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರುತ್ತಿದೆ ಎಂದರು.
ಪ್ರತಿಭಟನೆ ನಡೆಸುತಿದ್ದವರ ಪೈಕಿ ಮಾರುತಿ ಉಪ್ಪಾರ್ ಮಾತನಾಡಿ, ನಮ್ಮ ಏರಿಯಾದಲ್ಲಿ ಕಳೆದ 7ದಿನಗಳಿಂದ ಕುಡಿಯುವ ನೀರು ಬಿಟ್ಟಿಲ್ಲ. ಆದರೆ, ಗ್ರಾಮದ ದಾಸಜ್ಜನವರ ಗೋಣೆಪ್ಪ ಎನ್ನುವವರ ಖಾಸಗಿ ಹೊಲಕ್ಕೆ ಗ್ರಾ.ಪಂ.ಯ ಕುಡಿಯುವ ನೀರು ಅಕ್ರಮವಾಗಿ ಸರಬರಾಜು ಮಾಡಿ ನಮಗೆ ಅನ್ಯಾಯಮಾಡುತಿದ್ದಾರೆ ಎಂದು ಆರೋಪಿಸಿದರು. ಧ್ವನಿಗೂಡಿಸಿದ ಹತ್ತಾರು ಜನರು, ಗ್ರಾಮದ ಪಕ್ಕದಲ್ಲಿರುವ ತಾಂಡಲ್ಲಿ ನೀರುಗಂಟಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾನೆ ಇಲ್ಲಿಯ ನೀರುಗಂಟಿಗೆ ಏನಾಗಿದೆ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ.
ಶುದ್ಧ ಕುಡಿಯುವ ನೀರಿನ ಘಟಕದಿಂದ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್‍ಗೆ ಇದೇ ಗ್ರಾ.ಪಂ.ಯವರು ಅಕ್ರಮವಾಗಿ ಒಂದಿಂಚು ಪೈಪ್ ಮೂಲಕ ನೀರು ಸರಬರಾಜು ಮಾಡುತಿದ್ದಾರೆ ಎಂದು ಡಿ.ಬಸವರಾಜ್ ದೂರಿದರಲ್ಲದೆ, ಈ ಬಗ್ಗೆ ವಿಚಾರಿಸಿದರೆ ಯುವಕರ ಮೇಲೆ ಠಾಣೆಯಲ್ಲಿ ಮಾಲೀಕ ದೂರು ನೀಡುತ್ತಾನೆ ಎಂದು ಆರೋಪಿಸಿದರು.
ಇದರ ಮಧ್ಯೆ ಸಿಬ್ಬಂದಿ ನೀಲಾನಾಯ್ಕ್ ಈ ಗ್ರಾಮದಲ್ಲಿ ಇದು ಮೊದಲಲ್ಲ ಪದೇಪದೇ ಈ ರೀತಿ ಹೊಲಗಳಿಗೆ ನೀರು ಕೊಡುವುದು ಆಗಿದೆ ಎಂದು ಹೇಳಲು ಮುಂದಾಗಿ, ತಪ್ಪನ್ನು ಒಪ್ಪಿಕೊಂಡವರಂತೆ ವರ್ತಿಸಿ ಪಿಡಿಓರನ್ನು ಮತ್ತೊಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಘಟನೆ ಜರುಗಿತು.
ಕೂಡಲೆ ಜಾಗೃತರಾದ ಪಿಡಿಒ ರತ್ನಮ್ಮ ನಮ್ಮ ಗಮನಕ್ಕೆ ಇದಾವುದು ವಿಷಯ ಬಂದಿಲ್ಲ, ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಭರವಸೆ ನೀಡಿ ಅವರ ಮನವೂಲಿಸಿದರು. ಪ್ರತಿಭಟನಾಕಾರರು ಅವರಿಂದ ಲಿಖಿತವಾಗಿ ಪತ್ರ ಪಡೆದು ಬೀಗ ತೆರೆದುಕೊಟ್ಟರು.
ಈ ಸಂದರ್ಭದಲ್ಲಿ ಉಪ್ಪಾರ ಚನ್ನಪ್ಪ, ಕರಿಬಸವರಾಜ್, ಬೀರಪ್ಪ, ಬಿ.ಪರಶುರಾಮ್, ಯು.ರಮೇರ್ಶ, ಬಸಪ್ಪ ಹಾಗೂ ಜಗದೀಶ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ