ತುಮಕೂರು
ಸರ್ಕಾರದ ನಿರ್ದೇಶನವಿದ್ದರೂ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಒಬ್ಬರನ್ನು ನೋಡಿಕೊಂಡು ಮತ್ತೊಬ್ಬರು ಎನ್ನುವಂತೆ ಒತ್ತುವರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಒತ್ತುವರಿಗಳಿಂದಲೇ ಗಲಾಟೆಗಳು ನಡೆದು ವಿವಾದಗಳು ಕೋರ್ಟ್ ಮೆಟ್ಟಿಲು ಹತ್ತಿವೆ.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಸಂರಕ್ಷಿಸುವ ಹಾಗೂ ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ (ಒತ್ತುವರಿ ತೆರವುಗೊಳಿಸುವ ನಿಯಮಗಳು) ನಿಯಮ 2011 ರಚಿಸಲಾಗಿದ್ದು, ಸದರಿ ನಿಯಮಗಳ ಅನ್ವಯ ಏನೇನು ಕ್ರಮ ಜರುಗಿಸಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ. (4.6.2011ರ ಸರ್ಕಾರಿ ಸುತ್ತೋಲೆ) ಇದಾದ ನಂತರ 17.8.2013 ರಲ್ಲಿ ಮತ್ತೊಂದು ನಿಯಮಾವಳಿ ಸುತ್ತೋಲೆ ಹೊರಡಿಸಿ ಆಸ್ತಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಸೂಚನೆ ನೀಡಿತ್ತು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಒತ್ತುವರಿ ಆಸ್ತಿಗಳಿಗೆ ಸಂಬಂಧಿಸಿದಂತೆ 18.6.2019 ರಂದು ನಡೆದ ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಸಭೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ಒತ್ತುವರಿಗಳನ್ನು ತೆರವುಗೊಳಿಸಲು ಇದುವರೆಗೂ ಸಾಧ್ಯವಾಗದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದ ಕೆಲವು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೀಡಿರುವ ಮಾಹಿತಿಯೂ ಸಹ ಅಸಮರ್ಪಕವಾಗಿದೆ ಎಂಬುದನ್ನು ಸಮಿತಿ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಒತ್ತುವರಿ ಆಸ್ತಿಗಳಿಗೆ ಸಂಬಂಧಿಸಿದಂತೆ 1 ತಿಂಗಳ ಒಳಗಾಗಿ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಗೆ ಮಾಹಿತಿ ಒದಗಿಸುವಂತೆ ಸಮಿತಿಯ ನಿರ್ದೇಶನ ನೀಡಿದೆ. ಗ್ರಾಮ ಪಂಚಾಯತಿಯ ಆಸ್ತಿಗಳು ಯಾವುವು ಎಂಬುದನ್ನೂ ಸಹ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ ಗ್ರಾಮ ಠಾಣಾ, ಸಾರ್ವಜನಿಕ ರಸ್ತೆ, ಕಾಲುವೆಗಳು, ಕೆರೆಗಳು, ಆಟದ ಮೈದಾನ, ಉದ್ಯಾನವನಗಳು, ಸಾರ್ವಜನಿಕರ ಉಪಯೋಗಕ್ಕಾಗಿ ಇರಿಸಿರುವ ಪ್ರದೇಶ, ಸ್ಮಶಾನ ಅಥವಾ ರುದ್ರಭೂಮಿ, ನಿವೇಶನ, ಚರಂಡಿ, ಘಟಾರ, ಗ್ರಾಮಸಾರ ಚರಂಡಿ ಇತ್ಯಾದಿಗಳು.
ಮೇಲ್ಕಂಡಂತೆ ಒತ್ತುವರಿಯಾಗಿರುವ ಆಸ್ತಿಗಳನ್ನು ತೆರವುಗೊಳಿಸಿ ಶೀಘ್ರ ಕ್ರಮ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿನಾಂಕ: 21.6.2019ರ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳಿಗೆ ತುರ್ತು ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಕೆಳಕಂಡಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಒತ್ತುವರಿ ಆಸ್ತಿಗಳನ್ನು ಕೂಡಲೇ ಗುರುತಿಸಿ ಅಲ್ಲಿ ಒತ್ತುವರಿ ಆಸ್ತಿ ಎಂಬುದಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ನಾಮ ಫಲಕ ಅಳವಡಿಸಬೇಕು. ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ 2011 ರ ನಿಯಮಗಳನ್ನು ಅನುಸರಿಸುವುದು . ಗುರುತಿಸಲಾದ ಆಸ್ತಿ ಒತ್ತುವರಿ ಪ್ರಕರಣಗಳನ್ನು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಮಾಡುವುದು, ನಿಯಮಾನುಸಾರ ಒತ್ತುವರಿಯಾದ ಆಸ್ತಿಗಳನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವುದು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಮಿತಿಗೆ ವರದಿ ಮಾಡಲು ನಮೂನೆ 1 ಹಾಗೂ 2ನ್ನು ನೀಡಲಾಗಿದ್ದು, ಒತ್ತುವರಿಯ ಪ್ರಕರಣಗಳು ಏನೇನು ಎಂಬುದನ್ನೂ ಸಹ ಉಲ್ಲೇಖಿಸಲಾಗಿದೆ. ಒತ್ತುವರಿಯಾಗಿರುವ ಆಸ್ತಿಗಳ ಸಂಖ್ಯೆ, ಅವುಗಳನ್ನು ತೆರವುಗೊಳಿಸಿದರೆ ಆ ಬಗ್ಗೆ ಮಾಹಿತಿ, ಬಾಕಿ ತೆರವುಗೊಳಿಸಲು ಇರುವ ಆಸ್ತಿಗಳ ಸಂಖ್ಯೆ, ಒತ್ತುವರಿ ವ್ಯಕ್ತಿಗಳಿಂದ ಸಂಗ್ರಹಿಸಿದ ದಂಡನಾ ಮೊತ್ತ, ತೆರವುಗೊಳಿಸಿದ ಆಸ್ತಿಯನ್ನು ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿ ಇತ್ಯಾದಿ ಮಾಹಿತಿ ನೀಡಲು ತಿಳಿಸಲಾಗಿದೆ.