ಮೋದಿ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಪ್ರಾರಂಭ…..!

ನವದೆಹಲಿ:

    ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಆಪರೇಷನ್ ಸಿಂಧೂರ್ ಬಗ್ಗೆ ನಾಯಕರಿಗೆ ವಿವರಿಸಲು ಕೇಂದ್ರವು ಸರ್ವಪಕ್ಷ ಸಭೆಯನ್ನು ಕರೆದಿದೆ. ಸರ್ವ ಪಕ್ಷ ಸಭೆ ಈಗಾಗಲೇ ಪ್ರಾರಂಭವಾಗಿದ್ದು, ಗೃಹ ಮಂತ್ರಿ ಅಮಿತ್‌ ಶಾ, ಭದ್ರತಾ ಸಲಹೆಗಾರ ಅಮಿತ್‌ ಶಾ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ವಿಷಯಗಳು ಇಲ್ಲಿವೆ.

    ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೊಯ್ಬಾದ ಪ್ರಧಾನ ಕಚೇರಿ ಮತ್ತು ಬಹಾವಲ್ಪುರದ ಪ್ರಮುಖ ಭಯೋತ್ಪಾದಕ ತರಬೇತಿ ತಾಣಗಳು ಸೇರಿದಂತೆ ಗುರಿಗಳ ಮೇಲೆ ನಡೆಸಲಾದ ಮಿಲಿಟರಿ ದಾಳಿಗಳ ಕುರಿತು ಕೇಂದ್ರವು ರಾಜಕೀಯ ನಾಯಕರಿಗೆ ಈ ಸರ್ವಪಕ್ಷ ಸಭೆಯಲ್ಲಿ ಮಾಹಿತಿ ನೀಡಲಿದೆ.

   ಕಾರ್ಯಾಚರಣೆಯ ಉದ್ದೇಶಗಳು, ದಾಳಿಗೊಳಗಾದ ನಿರ್ದಿಷ್ಟ ಭಯೋತ್ಪಾದಕ ನೆಲೆಗಳ ಕುರಿತು ಸರ್ಕಾರ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲದೆ ಗಡಿಯಲ್ಲಿ ಇರುವ ಉದ್ವಿಗ್ನತೆಯ ಕುರಿತು ಚರ್ಚೆ ನಡೆಯಲಿದೆ. ಸಭೆಗೂ ಮುನ್ನ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಗಡಿಯಾಚೆಗಿನ ಉದ್ವಿಗ್ನತೆ ಮತ್ತು ಪರಿಸ್ಥಿತಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ವಿವರಿಸಿದರು.

   ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳ ಶೆಲ್ ದಾಳಿಯಲ್ಲಿ 13 ನಾಗರಿಕರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈಗಾಗಲೇ ಕಾಶ್ಮೀರ, ಪಂಜಾಬ್‌ ಹಾಗೂ ರಾಜಸ್ಥಾನ ಗಡಿಯಲ್ಲಿ ಹೈಅಲರ್ಟ್‌ ಘೋಷಿಸಿದೆ. ರಾಜಸ್ಥಾನದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಪೊಲೀಸ್‌ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. 

   ಪಾಕಿಸ್ತಾನದೊಂದಿಗೆ 1,037 ಕಿ.ಮೀ ಗಡಿಯನ್ನು ಹಂಚಿಕೊಂಡಿರುವ ರಾಜಸ್ಥಾನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಗುಂಡು ಹಾರಿಸುವ ಆದೇಶ ನೀಡಲಾಗಿದೆ. ಭಾರತೀಯ ವಾಯುಪಡೆ ಕಟ್ಟೆಚ್ಚರ ವಹಿಸಿದೆ. ಪಶ್ಚಿಮ ವಲಯದಲ್ಲಿ ಯುದ್ಧ ವಿಮಾನಗಳು ಗಸ್ತು ತಿರುಗುತ್ತಿರುವುದರಿಂದ ಜೋಧ್‌ಪುರ, ಕಿಶನ್‌ಗಢ ಮತ್ತು ಬಿಕಾನೇರ್ ವಿಮಾನ ನಿಲ್ದಾಣಗಳಿಂದ ವಿಮಾನಗಳ ಹಾರಾಟವನ್ನು ಮೇ 9 ರವರೆಗೆ ಸ್ಥಗಿತಗೊಳಿಸಲಾಗಿದೆ. ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿವೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link