ಗ್ರಾಮೀಣ ಭಾಗದ ವಿದ್ಯಾರ್ಥಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ

 ಕೊಟ್ಟೂರು

     ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ನಿರ್ಧರಿಸಲು ಜಂಟಿ ಉನ್ನತ ಪರೀಕ್ಷೆಯ (ಜೆಇಇ ಅಡ್ವಾನ್ಸ್) ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಿರೀಶ್ ದೊಡ್ಡಮನಿ 1746ನೇ ರ್ಯಾಂಕ್ (ರಿಜಿಸ್ಟರ್ ನಂಬರ್-R113218632)ಪಡೆಯುವುದರ ಮೂಲಕ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಐಐಟಿ ಕೌನ್ಸಲಿಂಗ್‍ಗೆ ಹಾಜರಾಗಲು ಅರ್ಹತೆಯನ್ನು ಪಡೆಯುವುದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದ್ದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾನೆ.

      ಕೊಟ್ಟೂರು ಪಟ್ಟಣದ ಹತ್ತಿರವಿರುವ ಕೋಗಳಿ ಗ್ರಾಮದ ಬಡ ರೈತನಾದ ರಿಂದೇಶ್ ಹಾಗೂ ಸುವರ್ಣ ದಂಪತಿಗಳ ಮಗನಾದ ಗಿರೀಶ್ ದೊಡ್ಡಮನಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ಶಿಕ್ಷಣವನ್ನು ಪಡೆಯುವುದರ ಜೊತೆಗೆ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾನೆ.

      ಶನಿವಾರದಂದು ನಡೆದ ಸನ್ಮಾನ ಸಮಾರಂಭದಲ್ಲಿ ಗಿರೀಶ್ ದೊಡ್ಡಮನಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದು ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಜೆಇಇ, ನೀಟ್, ಕೆ ಸಿಇಟಿ ಪರೀಕ್ಷೆಗೆ ನಿರಂತರ ವ್ಯವಸ್ಥಿತವಾದ ತರಬೇತಿಯಿಂದಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.

        ಪ್ರಾಂಶುಪಾಲರಾದ ವೀರಭದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ, ಪ್ರಾಮಾಣಿಕವಾಗಿ ವ್ಯಾಸಂಗ ಮಾಡಿದರೆ ಯಶಸ್ವಿಯಾಗಬಹುದು ಜೊತೆಗೆ ಗಿರೀಶ್ ದೊಡ್ಡಮನಿ 2 ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ನೀಡಿದಂತಾಗಿದೆ. ಮೊದಲನೇ ಸಂದೇಶ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಐಐಟಿಗೆ ಆಯ್ಕೆಯಾಗಬಹುದು.

      ಎರಡನೇ ಸಂದೇಶ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ ಸಾಧ್ಯ ಎನ್ನುವುದಾದರೆ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಇನ್ನೂ ಸುಲಭವಾಗುವುದು ಹಾಗೂ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕೆಂದು ತಿಳಿಸಿದರು. ನಮ್ಮ ಸಂಸ್ಥೆಯಲ್ಲಿ ಜೆಇಇ, ನೀಟ್ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದಕ್ಕೆ ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗಿದೆ. ಈ ಸಾಧನೆಗೈದ ವಿದ್ಯಾರ್ಥಿಗೆ ಹಾಗೂ ಪೋಷಕರಿಗೆ ಸನ್ಮಾನ ಮಾಡಿ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link