ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಗೆ ಕೂಡ್ಲಿಗಿಯಲ್ಲಿ ಅದ್ಧೂರಿ ಸ್ವಾಗತ

ಬಳ್ಳಾರಿ

       ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣಕ್ಕೆ ಶುಕ್ರವಾರ ಪ್ರವೇಶಿಸಿತು.

       ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಕೂಡ್ಲಿಗಿ ಪಟ್ಟಣಕ್ಕೆ ಪ್ರವೇಶಿಸುತ್ತಲೇ ಅದ್ಧೂರಿಯಾದ ಸ್ವಾಗತ ದೊರಕಿತು. ಅಧಿಕಾರಿಗಳು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತ್ಯಂತ ಅದ್ಧೂರಿಯಾದ ಸ್ವಾಗತವನ್ನು ಕೋರಿದರು. ಮಹಾತ್ಮಾಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ, ವೈಷ್ಣವಿ ಜನತೋ… ಸೇರಿದಂತೆ ವಿವಿಧ ಭಜನ್‍ಗಳನ್ನು ಹಾಡಿದರು. ಗಾಂಧೀಜಿ ಪರ ಜೈಘೋಷ ಹಾಕಿ ಸಂಭ್ರಮಿಸಿದರು.

        ತಹಸೀಲ್ದಾರ್ ಎಲ್.ಕೃಷ್ಣಮೂರ್ತಿ ಅವರು ಕೂಡ್ಲಿಗಿ ಪಟ್ಟಣದ ಗಾಂಧೀಜಿ ಚಿತಾಭಸ್ಮ ಹುತಾತ್ಮತ ಸ್ಮಾರಕದ ಬಳಿ ವಿಶೇಷ ಪೂಜೆ ಸಲ್ಲಿಸಿ ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕುವುದರ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿ ಪರ ಜೈ ಘೋಷಗಳನ್ನು ಕೂಗುವುದರ ಮೂಲಕ ನೆರೆದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

         ಸ್ತಬ್ಧಚಿತ್ರದ ಎದುರುಗಡೆ ಮಹಾತ್ಮಾಗಾಂಧೀಜಿ ಅವರು ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಪ್ರತಿಮೆ, ಗಾಂಧೀಜಿ ಅವರು ದಂಡಿಸತ್ಯಾಗ್ರಹ ನಡೆಸಿರುವುದು ಮತ್ತು ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಹೆಜ್ಜೆ ಹಾಕಿರುವುದು,ಗಾಂಧೀಜಿ ಅವರ ಬಾಲ್ಯ ಜೀವನದಿಂದ ಹಿಡಿದು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಿತವಾಗುವವೆಗಿನ ರೇಖಾ ಚಿತ್ರಗಳು ಹಾಗೂ ವೈವಿಧ್ಯಮಯ ಚಿತ್ರಗಳು ಸ್ತಬ್ಧಚಿತ್ರ ರಥಯಾತ್ರೆಯಲ್ಲಿವೆ. ಇದರ ಜೊತೆಗೆ ರಥಯಾತ್ರೆಯಲ್ಲಿ ಅಳವಡಿಸಲಾಗಿರುವ ಎಲ್‍ಇಡಿಯಲ್ಲಿ ಮಹಾತ್ಮರ ಸಂದೇಶಗಳು ಭಿತ್ತರವಾಗುತ್ತಿರುವುದನ್ನು ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವೀಕ್ಷಿಸಿದರು. ರಥದಲ್ಲಿನ ಪ್ರಿಯವಾದ ಭಜನೆಗಳ ಸಂಗೀತವನ್ನು ನೆರೆದವರು ಆಲಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕೃಷ್ಣಮೂರ್ತಿ ಅವರು, ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡೀ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗಳು ರಾಜ್ಯದಾದ್ಯಂತ ಸಂಚರಿಸುತ್ತಿವೆ. ಶಾಂತಿ ಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆಯು ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಚರಿಸಿ ಕೂಡ್ಲಿಗಿಗೆ ಇಂದು ಬಂದಿರುವುದು ಖುಷಿಯ ಸಂಗತಿ ಎಂದರು.

         ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಹಾತ್ಮರ ವಿಚಾರಧಾರೆಗಳು ಮತ್ತು ಅವರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದ ಅವರು

         ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಥಯಾತ್ರೆಯನ್ನು ವೀಕ್ಷಿಸಬೇಕು ಎಂದರು. ಸ್ತಬ್ಧಚಿತ್ರ ವೀಕ್ಷಿಸಿ ವಿದ್ಯಾರ್ಥಿಗಳು ಫುಲ್ ಖುಷ್: ಮಹಾತ್ಮ ಗಾಂಧೀಜಿ ಅವರ ಸ್ತಬ್ಧಚಿತ್ರ ರಥಯಾತ್ರೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳು ಫುಲ್ ಖುಷ್ ಆದರು. ಗಾಂಧೀಜಿ ಅವರ ಬಾಲ್ಯದ ಜೀವನದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗಿನ ಎಲ್ಲ ಸ್ತಬ್ಧಚಿತ್ರಗಳನ್ನು ಒಂದೊಂದಾಗಿ ವೀಕ್ಷಿಸಿದ ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು ಮತ್ತು ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷ್ ಆದರು.

      ಈ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಯ ಮೆರವಣಿಗೆಯು ಕೂಡ್ಲಿಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಎರಡು ಗಂಟೆಗಳ ಕಾಲ ತಂಗಿದ್ದ ಈ ಸ್ತಬ್ಧಚಿತ್ರ ರಥಯಾತ್ರೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಾಂಧಿ ಅನುಯಾಯಿಗಳು,ಸಾರ್ವಜನಿಕರು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು.

       ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಈ ಸ್ತಬ್ಧ ಚಿತ್ರ ರಥಯಾತ್ರೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.

       ಈ ಸಂದರ್ಭದಲ್ಲಿ ಪ್ರೊಬೆಷನರಿ ತಹಸೀಲ್ದಾರ್ ಮಂಜುನಾಥ, ಸರಕಾರಿ ಪದವಿ ಪೂರ್ವ ಕಾಲೇಜುನ ಪ್ರಾಂಶುಪಾಲ ಬಿ.ಆರ್.ನಾಗರಾಜಪ್ಪ, ಪ್ರೌಢಶಾಲೆಯ ಮುಖ್ಯಗುರು ಕೆ.ಮಾರಪ್ಪ, ಉಪನ್ಯಾಸಕರುಗಳಾದ ಜಗದೀಶ್ ಚಂದ್ರ ಬೋಸ್, ಶ್ರೀನಿವಾಸ, ಗೌಡ್ರು ಬಸವರಾಜ ಸೇರಿದಂತೆ ಅನೇಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link