ತಂತ್ರಜ್ಞಾನದ ಕೊರತೆಯಿಂದ ಗುಡಿ ಕೈಗಾರಿಕೆಗೆ ಗರ

ದಾವಣಗೆರೆ 

          ತಂತ್ರಜ್ಞಾನದ ಕೊರತೆಯಿಂದಾಗಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮೀನಾ ಚಂದವರ್‍ಕರ್ ಕಳವಳ ವ್ಯಕ್ತಪಡಿಸಿದರು.

          ಸಮೀಪದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ವಾಣಿಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ “ಭಾರತದ ಗುಡಿ ಕೈಗಾರಿಕೆಗಳ ಎದುರಿರುವ ಸವಾಲುಗಳು ಹಾಗೂ ಅವಕಾಶಗಳು” ವಿಷಯ ಕುರಿತು ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ದೇಶದ ಆರ್ಥಿಕತೆಗೆ ಗುಡಿ ಕೈಗಾರಿಕೆಗಳು ಬೆನ್ನೆಲುಬಾಗಿವೆ. ಆದರೆ, ತಂತ್ರಜ್ಞಾನದ ಕೊರತೆಯಿಂದಾಗಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಗುರುತಿಸಿಕೊಳ್ಳಬೇಕಾದರೆ, ತಾಂತ್ರಿಕತೆಯಲ್ಲಿ ಹೆಚ್ಚಿನ ಅನ್ವೇಷಣೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

           ಹಲವಾರು ಕ್ಷೇತ್ರಗಳಲ್ಲಿ ಇಂದು ಹೇರಳವಾದ ಉದ್ಯೋಗವಕಾಶಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಹೋಮ್ ನರ್ಸಿಂಗ್ ಸೇವೆಗಳೂ ಸಹ ಇಂದು ಪ್ರಾಮುಖ್ಯತೆ ಪಡೆಯುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಸಾಥ್ ನೀಡುತ್ತಿದೆ ಎಂದರು.
ಯುವಜನರು ಮೀಸಲಾತಿಗಾಗಿ ಕಾಯುತ್ತಾ ಕೂರದೇ ಸತತ ಪರಿಶ್ರಮ ಪಡುವ ಮೂಲಕ ಆರ್ಥಿಕ ನೀತಿಯನ್ನು ಅರ್ಥ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ, ನಿಮ್ಮ ಯಶಸ್ಸಿನ ಜೊತೆಗೆ ದೇಶದ ಅಭಿವೃದ್ಧಿಯು ಸಾಧ್ಯವಾಗಲಿದೆ ಎಂದರು.

         ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್ ವಿ. ಹಲಸೆ ಮಾತನಾಡಿ, ಸಣ್ಣ ಕೈಗಾರಿಕೆಗಳಿಗೆ ಹೆಚ್ಚೆಚ್ಚು ಪ್ರೋತ್ಸಾಹ ನೀಡಿದಾಗ ಮಾತ್ರ ದೇಶದ ಆರ್ಥಿಕತೆ ಸುಸ್ಥಿರವಾಗಲಿದೆ. ಗುಡಿ ಕೈಗಾರಿಕೆಗಳಲ್ಲಿ ಹಣದ ಚಲಾವಣೆ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾಭ್ಯಾಸದೊಂದಿಗೆ ವಾಣಿಜ್ಯ ಕ್ಷೇತ್ರದಲ್ಲಿ ಪರ್ಯಾಯ ಶಿಕ್ಷಣವನ್ನು ಪಡೆದರೆ ಹೆಚ್ಚಿನ ಉದ್ಯೋಗವಕಾಶ ದೊರೆಯಲಿವೆ ಎಂದರು.

        ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಕಣ್ಣನ್ ಮಾತನಾಡಿ, ದೇಶದ ಆರ್ಥಿಕತೆಯ ಒಟ್ಟು ಲಾಭದಲ್ಲಿ ಶೇ. 45 ಭಾಗ ಗುಡಿ ಕೈಗಾರಿಕೆಗಳ ಪಾತ್ರವಿದೆ. ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಾಣಿಜ್ಯ ವಹಿವಾಟು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

        ಒಂದು ದೇಶಕ್ಕೆ ಕೈಗಾರಿಕೆಗಳ ಅವಶ್ಯಕತೆ ಹೆಚ್ಚಾಗಿದ್ದು, ಅದು ಲಾಭದ ಕೇಂದ್ರ ಬಿಂದುವಾಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ರ್ತದ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಸರ್ಕಾರ ಕೋಟ್ಯಾಂತರ ಹಣವನ್ನು ವಿನಿಯೋಗಿಸುತ್ತಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಲಕ್ಷ್ಮಣ್, ಪ್ರಾಧ್ಯಾಪಕರಾದ ಪ್ರೊ.ಅನಿತಾ ಹೆಚ್. ಎಸ್, ಪ್ರೊ. ಸೀರಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap