ದಾವಣಗೆರೆ:
ಸ್ವಾರ್ಥ ಹಾಗೂ ಕುಟುಂಬದ ಏಳಿಗೆಗೆ ಸೀಮಿತವಾಗಿರುವವರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಕೇವಲ ದಾವಣಗೆರೆ ನಗರಕ್ಕೆ ಮಾತ್ರ ಸೀಮಿತರಾಗಿದ್ದರೇ ಹೊರತು, ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಂದು ದಿನವೂ ಜಿಲ್ಲೆಯಲ್ಲಿ ಎಲ್ಲೂ ಪ್ರಸಾರ ಮಾಡಲಿಲ್ಲ. ಆದರೆ, ಸಂಸದ ಸಿದ್ದೇಶ್ವರ್ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ 3ರಿಂದ 4 ಬಾರಿ ಸುತ್ತಾಡಿದ್ದಾರೆ. ಅಲ್ಲದೆ, ಸಾಮಾನ್ಯ ವ್ಯಕ್ತಿಗೂ ಸುಲಭವಾಗಿ ಸಿಗುತ್ತಾರೆ. ಸಂಸದರ ಅನುದಾನವನ್ನು ರಾಜ್ಯದಲ್ಲೇ ಅತಿಹೆಚ್ಚು ಬಳಸಿರುವ ಕೀರ್ತಿ ಸಿದ್ದೇಶ್ವರ್ ಅವರಿಗೆ ಸಲ್ಲಲಿದೆ ಎಂದು ಹೇಳಿದರು.
ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳಿಗೂ ಕಾಂಗ್ರೆಸ್ ನಾಯಕರು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಇಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲೂ ಸಹ ನೆಹರೂ ಕುಟುಂಬಕ್ಕೆ ಸಂಬಂಧಿಸಿದವರ ಹೆಸರುಗಳೇ ರಾರಾಜಿಸುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಬಹುತೇಕ ಯೋಜನೆಗಳನ್ನು ಪ್ರಧಾನ ಮಂತ್ರಿ ಹೆಸರಿನಲ್ಲೇ ಜಾರಿಗೊಳಿಸಿದ್ದಾರೆ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೆತ್ರದ ಬಿಜೆಪಿ ಅಧ್ಯಕ್ಷ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಸಂಸದ ಸಿದ್ದೇಶ್ವರ್ ಯಾವ್ಯಾವ ಯೋಜನೆ, ಕಾಮಗಾರಿಗಳಿಗೆ 10 ಸಾವಿರ ಕೋಟಿ ಅನುದಾನ ತಂದಿದ್ದಾರೆಂಬ ವಿಚಾರವನ್ನು ಕರಪತ್ರ ಮುದ್ರಿಸಿ ಮನೆ-ಮನೆಗೂ ತಲುಪಿಸಿದ್ದೇವೆ. ಆದರೂ ಬಾಯಿ ಚಪಲಕ್ಕಾಗಿ ಯಾರನ್ನೋ ಮೆಚ್ಚಿಸಲು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರಿಗೆ ಮೇ 23ರ ಫಲಿತಾಂಶದ ದಿನ ಉತ್ತರ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ. ಹೀಗಾಗಿಯೇ ಶಾಮನೂರು ಕುಟುಂಬದವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ಸಿಗರು ತಮ್ಮ ಎಂ-ಸ್ಯಾಂಡ್ ಉದ್ಯಮವನ್ನು ಮೇಲೆತ್ತುವ ಸಲುವಾಗಿ ನಗರದಲ್ಲಿ ಒಂದೆರೆಡು ಸಿಸಿ ರಸ್ತೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಜಿಲ್ಲೆಯ ಇನ್ಯಾವುದೇ ಹಳ್ಳಿಗೂ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾ ಮುಖಂಡರಾದ ಕೆ.ಪ್ರಸನ್ನಕುಮಾರ್, ಶಂಕರಗೌಡ ಬಿರಾದಾರ್, ಶಿವಪ್ರಕಾಶ್, ವೀರೇಶ ಪೈಲ್ವಾನ್, ಶಿವನಗೌಡ ಪಾಟೀಲ್, ಗೌತಮ್ ಜೈನ್, ಸೋಗಿ ಶಾಂತಕುಮಾರ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
