ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಶಾಸಕರ ಖಡಕ್ ಸೂಚನೆ

ಚಳ್ಳಕೆರೆ

   ತಾಲ್ಲೂಕಿನ ತಳಕು ರೈತ ಸಂಪರ್ಕ ಕೇಂದ್ರಕ್ಕೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಶುಕ್ರವಾರ ದಿಢೀರ್ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ರೈತರ ನಮಗೆ ಬಿತ್ತನೆ ಮಾಡಲು ಗುಣಮಟ್ಟದ ಬೀಜ ಸಿಗುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

     ಕೂಡಲೇ ಶಾಸಕ ಶ್ರೀರಾಮುಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಇತ್ತೀಚಿನ ದಿನಗಳಲ್ಲಿ ತಳಕು ಹೋಬಳಿ ಮಟ್ಟದಲ್ಲಿ ದೇವರ ಕೃಪೆಯಿಂದ ಅಲ್ಪಸ್ವಲ್ಪ ಮಳೆಯಾಗಿದ್ದು, ರೈತರು ಸಂತಸದಲ್ಲಿದ್ದು, ಭೂಮಿಗೆ ಬೀಜವನ್ನು ಹಾಕುವ ನಿಟ್ಟಿನಲ್ಲಿ ಪ್ರತಿನಿತ್ಯ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ಧಾರೆ. ಆದರೆ ರೈತರಿಗೆ ಸಮಪರ್ಕವಾಗಿ ಶೇಂಗಾ ಬಿತ್ತನೆ ಬೀಜ ದೊರಕುತ್ತಿಲ್ಲವೆಂಬುವುದು ರೈತರ ಆರೋಪವಾಗಿದೆ.

     ಕೆಲವು ಸಂದರ್ಭದಲ್ಲಿ ಕೆಲವೇ ಕೆಲವು ರೈತರಿಗೆ ಶೇಂಗಾ ಬಿತ್ತನೆ ಬೀಜ ನೀಡಿ, ದಾಸ್ತಾನಿಲ್ಲವೆಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಬೀಜ ಸಿಗದೆ ಇರಲು ಕಾರಣವೇನು. ಕೃಷಿ ಇಲಾಖೆಯೇ ರೈತರಿಗೆ ಕನಿಷ್ಟ ಪಕ್ಷ ಬಿತ್ತನೆ ಬೀಜ ನೀಡದೇ ಇದ್ದರೆ ರೈತ ತಮ್ಮ ಜಮೀನುಗಳಿಗೆ ಏನು ಬಿತ್ತಬೇಕು. ಈ ಭಾಗದ ಒಟ್ಟು ರೈತರ ಹಾಗೂ ಬೇಡಿಕೆ ಇರುವ ಶೇಂಗಾ ಬಿತ್ತನೆ ಬೀಜವನ್ನು ದಾಸ್ತಾನು ಮಾಡುವುದು ಕೃಷಿ ಇಲಾಖೆಯ ಜವಾಬ್ದಾರಿಯಾಗಿದೆ. ಈ ಅದನ್ನು ಸರಿಯಾಗಿ ನಿಬಾಯಿಸದೆ ರೈತರಿಗೆ ತೊಂದರೆ ಕೊಟ್ಟಲ್ಲಿ ಅಧಿಕಾರಿಗಳ ವಿರುದ್ದ ಸರ್ಕಾರಕ್ಕೆ ಕಾನೂನು ಕ್ರಮಕ್ಕಾಗಿ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

     ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳನವರ್ ಮಾತನಾಡಿ, ಇತ್ತೀಚೆಗೆ ತಾನೇ ಮಳೆಯಾಗಿದ್ದು, ಒಂದೇ ಬಾರಿ ರೈತರು ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕದ ಮುಂದೆ ಜಮಾಯಿಸುತ್ತಯಿದ್ದು, ಬೀಜ ವಿತರಣೆಗೆ ಅಡ್ಡಿಯಾಗಿದೆ. ರೈತರಿಗೆ ಅವಶ್ಯಕತೆ ಇರುವಷ್ಟು ಶೇಂಗಾ ಬಿತ್ತನೆ ಬೀಜವನ್ನು ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕಾಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಉತ್ತಮ ಬಿತ್ತನೆ ಬೀಜ ಇರುವ ಕಡೆ ಖರೀದಿಸಿ ನೀಡಲಾಗುತ್ತಿದೆ.

     ಯಾವುದೇ ಹಂತದಲ್ಲಿ ರೈತರಿಗೆ ಶೇಂಗಾ ಬಿತ್ತನೆ ಬೀಜ ಸುಲಭವಾಗಿ ದೊರಕುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಶಾಸಕರಿಗೆ ಮನವಿ ಮಾಡಿದರು. ಈಸಂದರ್ಭದಲ್ಲಿ ಶಾಸಕ ಶ್ರೀರಾಮುಲು ಮತ್ತೊಮ್ಮೆ ಕೃಷಿ ಇಲಾಖೆ ಅಧಿಕಾರಿಯನ್ನು ಎಚ್ಚರಿಸಿ ರೈತರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಅನ್ನದಾತನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕೆಂದು ತಾಕೀತು ಮಾಡಿದರು.

      ರೈತ ಸಂಘದ ಮುಖಂಡ ಬಸವರೆಡ್ಡಿ ಮಾತನಾಡಿ, ಪ್ರತಿನಿತ್ಯ ರೈತರು ಬೆಳಗ್ಗೆಯಿಂದ ಸಂಜೆವರೆಗೆ ರೈತ ಸಂಪರ್ಕ ಕೇಂದ್ರಗಳ ಮುಂದೆ ದಾಖಲಾತಿಗಳನ್ನು ಹಿಡಿದು ಅಲೆಯುತ್ತಾರೆ. ಮಳೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ರೈತರಿಗೂ ಬೀಜ ಬಿತ್ತುವ ಆತುರ ಹೆಚ್ಚಿದೆ. ಪ್ರಸ್ತುತ ಎರಡು ಪಾಕೇಟ್ ಮಾತ್ರ ಬಿತ್ತನೆ ಶೇಂಗಾ ನೀಡುತ್ತಿದ್ದು, ಇದು ರೈತರಿಗೆ ಸಾಕಾಗುತ್ತಿಲ್ಲ. ಅದರಲ್ಲೂ ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆಯಾದ ಶೇಂಗಾದಲ್ಲಿ ಹುಳು, ಜೊಳ್ಳುಗಳಿಂದ ಕೂಡಿದ್ದು, ಇದು ರೈತರಿಗೆ ಆತಂಕ ಉಂಟು ಮಾಡಿದೆ.

      ಇಲಾಖೆ ನೀಡುವ ಬೀಜದ ಪ್ರಮಾಣ ರೈತರಿಗೆ ಸಾಲದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ನೀಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗೇಂದ್ರಪ್ಪ, ವಿ.ರಾಮರೆಡ್ಡಿ, ತಿಪ್ಪೇಸ್ವಾಮಿ, ಹೊನ್ನೂರು ಗೋವಿಂದಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಯಪಾಲಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜಣ್ಣ, ಎಚ್.ವಿ.ಪ್ರಕಾಶ್, ತರಕಾರಿ ಓಬಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap