ಗುರುವೆಂದರೆ ಕತ್ತಲೆಯನ್ನು ಹೋಗಲಾಡಿಸುವವನು : ಪ್ರೊ.ಸಿ.ಪಿ ಕೃಷ್ಣಕುಮಾರ್

ತುಮಕೂರು

     ಗುರುವೆಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದರ್ಥ. ಜ್ಞಾನವನ್ನು ವಿಸ್ತರಣೆಗೊಳಿಸುವುದು, ನವೀಕರಣ ಗೊಳಿಸುವುದು, ಪರಿಷ್ಕರಣಗೊಳಿಸುವುದು ಅಧ್ಯಾಪಕನ ಮೂಲಭೂತ ಕರ್ತವ್ಯವಾಗಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರೂ ನಿರಂಕುಶಮತಿಗಳಾಗಬೇಕು, ಏಕಾಗ್ರತೆ ಮತ್ತು ಶ್ರದ್ಧೆ ಇಬ್ಬರಲ್ಲಿ ಬರಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಲೇಖಕ ಪ್ರೊ.ಸಿ.ಪಿ ಕೃಷ್ಣಕುಮಾರ್ ತಿಳಿಸಿದರು.

     ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹೊಸತು ಸಂಪೂರ್ಣವಾಗಿ ಬಂದಿಲ್ಲ, ಹಳತು ಸಂಪೂರ್ಣವಾಗಿ ಅಳಿದಿಲ್ಲ, ನಾವು ಒಂದು ರೀತಿಯ ಸಂಕ್ರಮಣ ಕಾಲಘಟ್ಟ ದಲ್ಲದ್ದೇವೆ. ವಿದ್ಯಾರ್ಥಿಯು ತಾತ್ಕಾಲಿಕವಾಗಿ ವಿದ್ಯಾರ್ಥಿಯಾದರೆ ಅಧ್ಯಾಪಕ ಶಾಶ್ವತ ವಿದ್ಯಾರ್ಥಿಯಾಗಿರುತ್ತಾನೆ. ಗುರು ಒಂದು ಯಂತ್ರವಲ್ಲ ಒಂದು ಧ್ಯೇಯ. ಆದರೆ ಈಗ ಗುರು ಎಂಬುವನು ಯಂತ್ರದಂತಾಗಿದ್ದಾನೆ ಎಂದರು.

    ವೈದ್ಯ ದೇಹದ ಆರೋಗ್ಯವನ್ನು ಕಾಪಾಡಿದರೆ ಗುರುವು ಆತ್ಮದ ಆರೋಗ್ಯವನ್ನು ಕಾಪಾಡುತ್ತಾನೆ. ಭಾರತವನ್ನು ಅರಿಯಬೇಕಾದರೆ ನಾವು ವಿವೇಕನಂದರನ್ನು ಓದಬೇಕಾಗುತ್ತದೆ. ಅವರ ಜ್ಞಾನಮಟ್ಟ ಚಿಕ್ಕವಯಸ್ಸಿನಲ್ಲಿ ಪರ್ವತದಷ್ಟು ಅಪಾರವಾಗಿತ್ತು. ಎಂದು ಹೇಳಿದರು.ನಮ್ಮ ಶಿಕ್ಷಣ ಮಂಕಾಗಿದೆ, ಅದಕ್ಕೆ ಕಳೆಯಿಲ್ಲದಂತಾಗಿದೆ, ಶಿಕ್ಷಣ ಪ್ರಜ್ವಲಿಸಬೇಕಾದರೆ ಅಧ್ಯಾಪಕ ಪಕ್ವನಾಗಬೇಕು. ಕುವೆಂಪು ಮಾತಿನಂತೆ ಭತ್ತ ತುಂಬುವ ಚೀಲಗಳಾಗಬಾರದು ಭತ್ತ ಬೆಳೆಯುವ ಗದ್ದೆಗಳಾಗಬೇಕು ಹೀಗಿದ್ದಾಗ ಶಿಕ್ಷಣದ ಮಟ್ಟ ಬೆಳೆದು ನಿಲ್ಲುತ್ತದೆ. ಆದರೆ ಈಗಿನವರು ತೂತು ಚೀಲಗಳಾಗಿದ್ದಾರೆ ಎಂದು ವಿಷಾದಿಸಿದರು.

      ವಿವಿಯ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಜಡತ್ವವನ್ನು ಬೆಳೆಸಿಕೊಳ್ಳದೆ ಕ್ರಿಯಾಶೀಲರಾಗುವುದು ನಮ್ಮ ಆದ್ಯ ಕರ್ತವ್ಯ. ಗುರು ಎಲ್ಲದರಲ್ಲೂ ಶ್ರೇಷ್ಠ ಅದನ್ನು ಉಳಿಸಿಕೊಳ್ಳಬೇಕು, ಬೆಳೆಸಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಮೌಲ್ಯಗಳು ಅಡಕವಾಗಬೇಕು ಎಂದರು.

     ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯಕ್ ಮಾತನಾಡಿ, ದೇಶದ ಬೆನ್ನೆಲುಬು ರೈತನಂತೆ ಶಿಕ್ಷಕ ಕೂಡ ಅದಕ್ಕಿಂತ ಮಿಗಿಲು. ಡಾ.ರಾಧಾಕೃಷ್ಣನ್ ಒಂದು ಅದ್ಭುತ ಮೇದಾವಿ. ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ನಮ್ಮ ಬದುಕಿನಲ್ಲಿ ಬೆಳಕು ಅರಿಯುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಯ ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಬಿ.ಕರಿಯಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಟಿ.ಎನ್ ಹರಿಪ್ರಸಾದ್ ಮತ್ತಿತ್ತರ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap