ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ

ಹಾನಗಲ್ಲ :

         ವಿದ್ಯಾರ್ಜನೆ ಕಾಲದ ಜೀವನಾನುಭವಗಳನ್ನು ಭವಿಷ್ಯದ ಬದುಕಿಗೆ ಸಾರ್ಥಕವಾಗಿ ಕಟ್ಟಿಕೊಳ್ಳುವ ಮೂಲಕ ಬದುಕನ್ನು ಬಂಗಾರ ಮಾಡಿಕೊಳ್ಳುವ ದೃಢತೆ ವಿದ್ಯಾರ್ಥಿ ಜೀವನದಲ್ಲಿಯೇ ಗಟ್ಟಿಗೊಳ್ಳಬೇಕು ಎಂದು ಜನತಾ ಶಿಕ್ಷಣ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಎ,ಎಸ್,ಬಳ್ಳಾರಿ ತಿಳಿಸಿದರು.

        ರವಿವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ, ಇಲ್ಲಿನ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ವಿದ್ಯಾದಾನ ಮಾಡಿದ ಗುರು ವಿದ್ಯಾ ಸಂಸ್ಥೆಗಳನ್ನು ಗೌರವಿಸಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಹಳಸುತ್ತಿವೆ.ಆದರೆ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನಪು ಮಾಡಿಕೊಂಡು ಗೌರವಿಸಿ, ಇದರ ನೆಪದಲ್ಲೇ ಹತ್ತಿಪ್ಪತ್ತು ವರ್ಷಗಳ ಹಿಂದಿನಿಂದ ಇರುವ ಸಂಬಂಧಗಳನ್ನು ಜಾಗೃತಗೊಳಿಸಿಕೊಳ್ಳುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದುದು ಎಂದರು.

        ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಟಿ.ಎನ್.ಕಾಮನಹಳ್ಳಿ, ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಜ್ಞಾನದ ಹಂಬಲ ಗುರುವಿಗೆ ಅರ್ಥವಾಗಬೇಕು. ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರಬೇಕು. ವಿದ್ಯಾರ್ಥಿಯನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ಗುರುವಿಗಿದೆ. ಆದರೆ ಗುರುವಿನ ಸೇವೆಯ ಪ್ರಾಮಾಣಿಕತೆಯೇ ಈಗ ಪ್ರಶ್ನಾರ್ಹವಾಗುತ್ತಿದೆ. ಆದರೆ ಉತ್ತಮ ಶಿಕ್ಷಕ ಉತ್ತಮ ವಿದ್ಯಾರ್ಥಿಯ ಪರಿಶ್ರಮವೇ ಈ ದೇಶಕ್ಕೆ ಒಳ್ಳೆಯ ವ್ಯಕ್ತಿತ್ವವನ್ನು ನೀಡಲು ಸಾಧ್ಯ ಎಂದರು.

        ನಿವೃತ್ತ ಪ್ರಾಚಾರ್ಯ ಲಲಿತಾ ದೇಸಾಯಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ತಾಯಿ-ಮಗುವಿನ ಸಂಬಂಧದಂತೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರ ಕೊಡುವುದು ಗುರುವಿನ ಆದ್ಯತೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ. ವಿದ್ಯಾರ್ಥಿಯ ಸಾಧನೆಯಿದೆ. ಆದರೆ ಬದುಕು ಕಟ್ಟಿಕೊಂಡ ಮೇಲೆ ಅದನ್ನು ಸ್ವಂತಕ್ಕೂ ಸಮಾಜಕ್ಕೂ ಸದುಪಯೋಗ ಪಡಿಸಬೇಕು. ಸ್ವಾರ್ಥಕ್ಕಿಂತ ನಿಸ್ವಾರ್ಥ ಸೇವೆಗೆ ಹೆಚ್ಚು ಬೆಲೆ ಇದೆ. ವಿದ್ಯಾರ್ಥಿಗಳು ಗುರುವಿಗೆ ಶಾಲು, ಹೂಹಾರ, ಹಣ್ಣು ನೀಡಿ ಗೌರವಿಸುವ ಗೌರವಕ್ಕಿಂತ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದೇ ದೊಡ್ಡ ಗೌರವ ಎಂದರು.

       ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಂಡ ಕನಸುಗಳು ನನಸಾದಾಗ ಸಮಾಜ ಹಾಗೂ ದಾರಿ ತೋರಿದ ಕುಟುಂಬವನ್ನು ಮರೆಯಬಾರದು. ನಮ್ಮ ಬದುಕಿಗೆ ಶಿಕ್ಷಣ ಬಾಳು ನೀಡಿದಂತೆ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾದವರಿಗೆ ಸೌಲಬ್ಯ ಒದಗಿಸಲು ಮುಂದಾಗಬೇಕು. ಸಮಾಜ ಸೇವೆಯಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಧಿಕಾರದಲ್ಲಿರುವವರಿಗೆ ಸಮಾಜ ಸೇವೆ ಇನ್ನಷ್ಟು ಸುಲಭ ಎಂದ ಅವರು, ಸಮಾಜ ಸೇವೆಗಾಗಿ ಒಂದಷ್ಟು ಸಮಯ ಕೊಡಿ ಎಂದರು.ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಷ್ಟಿನ ನಿರ್ದೇಶಕ ಗುರುಸಿದ್ದಪ್ಪ ಕೊಂಡೋಜಿ, ಅಶೋಕ ಷಡಗರವಳ್ಳಿ, ಶಿವಾಜಿ ಕಾಟೇಕರ, ನಿಂಗಪ್ಪ ಮಾಳನಾಯಕನಹಳ್ಳಿ, ಪ್ರೇಮವ್ವ ಗಾಳಿ ಅತಿಥಿಗಳಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link