ಶಿರಾ
ಮದ್ಯ ಮಾರಾಟದಿಂದ ಈವರೆಗಿನ ಸರ್ಕಾರಗಳು ರಾಜ್ಯವನ್ನಾಳಲು ಸಾಧ್ಯ ಎಂಬ ಭ್ರಮೆಯಲ್ಲಿಯೇ ಮುಳುಗಿದ್ದು, ಮದ್ಯ ಮಾರಾಟದಿಂದ ಜನ ಸಾಮಾನ್ಯರ ಜೀವನಗಳು ಅಸ್ತವ್ಯಸ್ಥಗೊಂಡಿವೆಯೇ ಹೊರತು ಇದರಿಂದ ಸರ್ಕಾರಗಳು ನಡೆಯುತ್ತಿಲ್ಲ ಎಂದು ರಂಗಕರ್ಮಿ ಹಾಗೂ ವೈದ್ಯರಾದ ಡಾ.ರಾಮಕೃಷ್ಣ ತಿಳಿಸಿದರು.
ಬಾ ಬಾಪು 150ನೇ ವರ್ಷಾಚರಣೆಯ ಅಂಗವಾಗಿ ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟಿರುವ ಸಾವಿರಾರು ಮಹಿಳೆಯರ ಕಾಲ್ನಡಿಗೆ ಜಾಥಾ ಶಿರಾ ನಗರಕ್ಕೆ ಜ.23 ರಂದು ಆಗಮಿಸಿದಾಗ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ನೂರಾರು ಕಿ.ಮೀ.ಗಳಿಂದ ಬರಿಗಾಲಲ್ಲಿಯೇ ನಡೆದು ಬರುತ್ತಿರುವ ಸಾವಿರಾರು ಮಹಿಳೆಯರ ಕೂಗು ಇಡೀ ರಾಜ್ಯದಲ್ಲಿ ಮದ್ಯಪಾನ ನಿಲ್ಲಿಸುವುದೇ ಆಗಿದೆ. ಹಲವು ವರ್ಷಗಳಿಂದಲೂ ಮದ್ಯ ಮಾರಾಟ ನಿಷೇಧಕ್ಕೆ ಸಂಘಟನೆಗಳು ಒತ್ತಾಯಿಸುತ್ತಿದ್ದರೂ ಈ ಮೊಂಡು ಸರಕಾರಗಳು ಜನ ಸಾಮಾನ್ಯರನ್ನು ಮದ್ಯ ಮಾರಾಟದಿಂದ ಹಾಳುಗೆಡುವುತ್ತಿವೆ ಎಂದರು.
ಬಿಸಿಲನ್ನೂ ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೊರಟಿರುವ ಈ ಜಾಥಾ ಸರ್ಕಾರದ ಕಣ್ಣು ತೆರೆಸುವುದಂತೂ ಖಚಿತ. ತಮ್ಮ ಇಡೀ ಕುಟುಂಬವನ್ನು ಬಿಟ್ಟು ಮಹಿಳೆಯರು ಹೋರಾಟದ ಹಾದಿ ಹಿಡಿದಿರುವುದನ್ನು ಸರಕಾರ ತೀಕ್ಷ್ಣವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಲೇಬೇಕು. ಇಲ್ಲವಾದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಲಿದೆ ಎಂದು ಡಾ.ರಾಮಕೃಷ್ಣ ತಿಳಿಸಿದರು.
ಕಾಲಿಗೆ ಚಪ್ಪಲಿಗಳಿಲ್ಲದೆ ನಡೆದುಕೊಂಡು ಬಂದಿದ್ದ ಅನೇಕ ಪಾದಯಾತ್ರಿಗಳಿಗೆ ವೈದ್ಯರ ಸಂಘದಿಂದ ಸುಮಾರು 13,000 ರೂ. ಮೌಲ್ಯದ ಚಪ್ಪಲಿಗಳನ್ನು ನೀಡಲಾಯಿತಲ್ಲದೆ, ದಣಿವಿನಿಂದ ಬಂದಿದ್ದ ಮಹಿಳೆಯರಿಗೆ ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಸಿ.ಎಂ.ಜಿ. ಫೌಂಡೇಷನ್‍ನ ಚಿದಾನಂದ್ ಎಂ.ಗೌಡ, ಆರ್.ವಿ.ಪುಟ್ಟಕಾಮಣ್ಣ, ರವಿಕೃಷ್ಣ ರೆಡ್ಡಿ, ಲಿಂಗೆಗೌಡ, ಡಾ||ಡಿ.ಎಂ.ಗೌಡ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶ್ರೀನಾಥ್, ಬಡೇನಹಳ್ಳಿ ಟಿ.ಗೋವಿಂದಯ್ಯ, ಟೈರ್ ರಂಗನಾಥ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ