ತುಮಕೂರು:
ಜಿಲ್ಲೆಯ ಕೆಲವು ಭಾಗಗಳಲ್ಲಿ ಬುಧವಾರ ಮುಂಜಾನೆ ಮಳೆ ಸುರಿದು ನಿದ್ರೆಯಲ್ಲಿದ್ದವರನ್ನು ವರುಣ ಎಚ್ಚರಿಸಿದ್ದಾನೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಿದೆ. ವರುಣನ ಕೃಪೆ ಕಂಡು ಬಹಳಷ್ಟು ಜನ ಸಂತಸಗೊಂಡಿದ್ದಾರೆ.
ಶಿರಾ ತಾಲ್ಲೂಕು, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮುಂಜಾನೆ ಸುಮಾರು 5.30 ರಿಂದಲೇ ಮಳೆ ಪ್ರಾರಂಭವಾಗಿದೆ. ಕೆಲವು ಕಡೆಗಳಲ್ಲಿ ವಿಪರೀತ ಗಾಳಿಬೀಸಿ ಮಳೆ ಕಡಿಮೆಯಾದರೆ ಮತ್ತೆ ಕೆಲವು ಕಡೆ ಸುಮಾರು ಒಂದು ತಾಸು ಮಳೆಯಾಗಿ ಸಣ್ಣಪುಟ್ಟ ಗುಂಡಿಗಳು ತುಂಬಿಕೊಂಡಿವೆ.
ಹಗಲಿಡೀ ಬಿಸಿಲು ಕಾದು ಸಂಜೆ ವೇಳೆಗೆ ಮೋಡಗಳು ಕೂಡಿಕೊಂಡು ಮಳೆ ಸುರಿಯುವುದು ವಾಡಿಕೆ. ಇದು ನಿಸರ್ಗದ ನಿಯಮ. ಮಳೆ ಬರುವುದಕ್ಕೆ ತನ್ನದೇ ಆದ ವೈಜ್ಞಾನಿಕ ಕಾರಣಗಳಿವೆ. ಇತ್ತೀಚೆಗೆ ಜಿಲ್ಲೆಯ ಅಲ್ಲಲ್ಲಿ ವರುಣ ಕೃಪೆ ತೋರಿರುವನಾದರೂ ಭರ್ಜರಿ ಮಳೆಯಾಗಿ ಕೆರೆಕಟ್ಟೆಗಳಿಗೆ ನೀರು ಬರುವ ಪರಿಸ್ಥಿತಿ ಇನ್ನೂ ಆಗಿಲ್ಲ. ಮೋಡಗಳು ಹುಟ್ಟುತ್ತವೆ, ಸಂಜೆಯ ವೇಳೆಗೆ ಕರಗಿ ಹೋಗುತ್ತವೆ ಅಥವಾ ವಿಪರೀತ ಗಾಳಿಗೆ ಮೋಡಗಳು ತೇಲಿ ಹೋಗುತ್ತವೆ.
ಯುಗಾದಿ ಕಳೆಯಿತೆಂದರೆ ಮಳೆಗಾಲ ಪ್ರಾರಂಭ ಎಂದೇ ರೈತಾಪಿ ವರ್ಗದಲ್ಲಿ ಭಾವನೆ ಇದೆ. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಈ ಬಾರಿಯೂ ಮುಂಗಾರು ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ವರ್ಷವೂ ಮುಂಗಾರು ಕೈಕೊಟ್ಟಿತು. ಅಲ್ಲಲ್ಲಿ ಮಳೆಯಾಗುತ್ತಿರುವುದಾದರೂ ಉತ್ತಮ ಮಳೆಯಾಗಲಿ, ಮುಂಗಾರು ಬಿತ್ತನೆಗೆ ಪೂರಕ ವಾತಾವರಣವಾಗಲಿ ಇಲ್ಲ. ಇದರಿಂದಾಗಿ ರೈತರು ಅತಂಕದಲ್ಲಿಯೇ ಇದ್ದಾರೆ. ಈ ನಡುವೆ ಮುಂಗಾರು ತಡವಾಗಿ ಆರಂಭವಾಗುತ್ತದೆ ಎಂಬ ಕೃಷಿ ವಿಜ್ಞಾನಿಗಳ ಮತ್ತು ಹವಾಮಾನ ಇಲಾಖೆಯ ಹೇಳಿಕೆಯಿಂದಾಗಿ ರೈತರು ಒಂದಿಷ್ಟು ನೆಮ್ಮದಿಯಿಂದ ಇದ್ದಾರೆ.
ಈ ನಡುವೆ ಬುಧವಾರ ಬೆಳ್ಳಂಬೆಳಿಗ್ಗೆ ಆಗಮಿಸಿರುವ ಮಳೆಯನ್ನು ಕಂಡು ಕೆಲವರಿಗೆ ಅಚ್ಚರಿಯೂ ಆಗಿರಬಹುದು. ಈ ರೀತಿಯ ಮಳೆ ಇದೇ ಹೊಸತಲ್ಲವಾದರೂ ಮುಂಜಾನೆ ವೇಳೆಯಲ್ಲಿ ಮಳೆಯಾಗಿರುವುದು ಅನಿರೀಕ್ಷಿತ. ತುಮಕೂರು-ಶಿರಾ ಮಾರ್ಗದ ಕಳ್ಳಂಬೆಳ್ಳ, ದೊಡ್ಡ ಆಲದ ಮರ, ಶಿರಾ ಪಟ್ಟಣ, ಶಿರಾ ತಾಲ್ಲೂಕಿನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಶಿರಾ ನಗರದಲ್ಲಿ ಮಳೆಗಿಂತ ಗಾಳಿಯೇ ಹೆಚ್ಚಾಗಿದೆ. ಕಟಾವೀರನಹಳ್ಳಿ, ಮೊದಲೂರು, ಭೂಪಸಂದ್ರ, ಮುದಿಮಡು, ಶಿರಾದಡು ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.
ಚಿಕ್ಕನಾಯಕನಹಳ್ಳಿ ಪಟ್ಟಣ, ಸಿಂಗದಹಳ್ಳಿ, ತೀರ್ಥಪುರ ಪ್ರದೇಶ, ವಜ್ರ, ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದೆ. ಕಿಬ್ಬನಹಳ್ಳಿ ಕ್ರಾಸ್ ಸುತ್ತಮುತ್ತ, ತೀರ್ಥಪುರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ನೀರು ಹರಿದಿದೆ. ಇದೇ ರೀತಿ ವರುಣ ಕೃಪೆ ತೋರಿದರೆ ರೈತರಲ್ಲಿರುವ ಆತಂಕ ದೂರವಾಗುತ್ತದೆ. ಮುಂಗಾರು ಬೆಳೆ ಸಾಧ್ಯವಾಗದಿದ್ದರೂ ಹಿಂಗಾರು ಬೆಳೆ ತೆಗೆಯಲು ಅನುಕೂಲವಾದ ವಾತಾವರಣ ಸೃಷ್ಟಿಯಾಗುತ್ತದೆ. ಅಲ್ಲದೆ, ಕೆರೆಕಟ್ಟೆಗಳಿಗೆ ನೀರು ಬಂದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬುದು ರೈತಾಪಿ ವರ್ಗದ ಅಭಿಪ್ರಾಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ