ದಾವಣಗೆರೆ :
ಸಾವಿರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ, ವಂಚನೆ ಮಾಡಿ ತಲೆ ಮರಿಸಿಕೊಂಡಿರುವ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಕಂಪನಿಯ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ, ಜಿಲ್ಲಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷ ಎಸ್.ಅಬ್ದುಲ್ ಮಜೀದ್ ಒತ್ತಾಯಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ವಂಚನೆ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸಿ ತಿಂಗಳಾಗುತ್ತಾ ಬಂದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈಗಾಗಲೇ ವಂಚನೆಗೊಳಗಾದವರಲ್ಲಿ 8 ಮಂದಿ ಮೃತಪಟ್ಟಿದ್ದಾರೆ.
ಅಲ್ಲದೆ, ಒಂದು ವಾರದ ಹಿಂದೆಯೇ ತನ್ನನ್ನು ಬಂಧಿಸುವಂತೆ ಮನ್ಸೂರ್ ಖಾನ್ ಸಿ.ಡಿ. ಬಿಡುಗಡೆ ಮಾಡಿದ್ದರೂ ಸಹ ರಾಜ್ಯ ಸರ್ಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ಪ್ರಭಾವಿ ರಾಜಕಾರಣಿಗಳು ಸಹ ಹಗರಣದಲ್ಲಿ ಶಾಮೀಲಾಗಿರುವುದರಿಂದ ಎಸ್‍ಐಟಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.
ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಕೇಂದ್ರ ಸರ್ಕಾರಕ್ಕೆ ತಾವು ಪತ್ರ ಬರೆದಿದ್ದು, 2-3 ದಿನಗಳಲ್ಲೇ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಕ್ರಮಕ್ಕೆ ಸೂಚಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದೆ. ಓರ್ವ ಸಾಮಾನ್ಯ ವ್ಯಕ್ತಿಯ ಪತ್ರಕ್ಕೂ ಕೇಂದ್ರ ಸರ್ಕಾರ ಇಷ್ಟು ವೇಗವಾಗಿ ಸ್ಪಂದಿಸುವಾಗ, ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಮುಸ್ಲಿಮರನ್ನು ನಿರಂತರವಾಗಿ ಓಟ್ ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅದೇ ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಈಗಲಾದರೂ ಮೈತ್ರಿ ಸರ್ಕಾರ ಎಚ್ಚೆತ್ತು ಹಣ ಕಳೆದುಕೊಂಡಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು. ಐಎಂಎ ವಂಚನೆ ಪ್ರಕರಣದಲ್ಲಿ ಮನ್ಸೂರ್ ಖಾನ್‍ಗೆ ಸಾಥ್ ನೀಡಿರುವ ನಾಲ್ವರು ಪ್ರಮುಖದಲ್ಲಿ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಇಲ್ಲೂ ಕೂಡ ಸಾಕಷ್ಟು ಜನರು ವಂಚನೆಗೊಳಗಾಗಿದ್ದಾರೆ. ಕಂಪನಿಯ ಏಜೆಂಟರು ಹಾಗೂ ನಿರ್ದೇಶಕರನ್ನು ಬಂಧಿಸಿ ವಿಚಾರಣೆ ಕೈಗೊಳ್ಳಬೇಕು. ವಿವಿಧ ಹೆಸರುಗಳಲ್ಲಿ ಐಎಂಎ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ಶಾಲೆಗಳನ್ನು ಸರ್ಕಾರವೇ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ನೂರಾರು ಜನರು ಐಎಂಎ ಕಂಪನಿಯಿಂದ ವಂಚನೆಗೊಳಗಾಗಿದ್ದಾರೆ. ಕಷ್ಟಪಟ್ಟು ಕೂಡಿಟ್ಟಿದ್ದ ಹಣವನ್ನು ಕಂಪನಿಯಲ್ಲಿ ತೊಡಗಿಸಿ ದಿಕ್ಕು ತೋಚದಂತಾಗಿದ್ದಾರೆ. ವಂಚನೆಗೊಳಗಾದವರಲ್ಲಿ ಶೇ.80ರಷ್ಟು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ, ಇಲ್ಲಿನ ಸ್ಥಳೀಯ ಮುಸ್ಲಿಂ ಮುಖಂಡರೆನಿಸಿಕೊಂಡವರು ಸಂತ್ರಸ್ತರ ಪರ ಧ್ವನಿ ಎತ್ತದಿರಲು ಕಾರಣವೇನು? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ಎನ್.ಓಂಕಾರಪ್ಪ, ಉಮೇಶ ಪಾಟೀಲ್, ಜಬೀವುಲ್ಲಾ, ತನ್ವೀರ್ ಅಹ್ಮದ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
