ಬೆತ್ತಲೆ ಮೆರವಣಿಗೆ ಪ್ರಕರಣ ಸಿಬಿಐಗೆ ವಹಿಸಿ : ದಸಂಸ ಆಗ್ರಹ

ದಾವಣಗೆರೆ:

    ಗುಂಡ್ಲುಪೇಟೆ ತಾಲೂಕಿನ ವೀರಪುರ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವುದಲ್ಲದೇ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಸವರ್ಣಿಯರು ಕೃತ್ಯ ವಿರೋಧಿಸಿ ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

      ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಎಸಿ ಕಚೇರಿಗೆ ತೆರಳಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ದ.ಸಂ.ಸ. ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಗುಂಡ್ಲುಪೇಟೆ ತಾಲೂಕಿನ ವೀರಾಪುರ ಗ್ರಾಮದ ವ್ಯಾಪ್ತಿಯ ಕಬ್ಬೆಕಟ್ಟೆ ಶ್ರೀ ಶನೇಶ್ವರ ದೇವಸ್ಥಾನದಲ್ಲಿದ್ದ ಎಂಬ ಏಕೈಕ ಕಾರಣಕ್ಕೆ ದಲಿತ ಯುವಕ ಪ್ರತಾಪ್ ಮೇಲೆ, ದೇವಸ್ಥಾನದ ಅರ್ಚಕ ಸೇರಿದಂತೆ ಹಲವರು ಹಲ್ಲೆ ಮಾಡಿರುವುದಲ್ಲದೇ, ಸಂಪೂರ್ಣವಾಗಿ ಬೆತ್ತಲೆ ಗೊಳಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಈ ಘಟನೆಯ ಹಿಂದೆ ಕಬ್ಬೆಕಟ್ಟೆ ಶ್ರೀಶನೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಕೈವಾಡವಿದ್ದು, ದಲಿತ ಯುವಕ ಪ್ರತಾಪ್ ದೇವಸ್ಥಾನಕ್ಕೆ ಬರುವಾಗಲೇ ಯಾವುದೇ ಬಟ್ಟೆ ಧರಿಸದೇ, ಬೆತ್ತಲೆಯಾಗಿ ಬಂದಿದ್ದಾನೆ. ದೇವಸ್ಥಾನದ ವಿಗ್ರಹಗಳನ್ನು ಧ್ವಂಸ ಮಾಡಿದ್ದಾನೆಂಬುದಾಗಿ ಕಥೆ ಕಟ್ಟುವ ಮೂಲಕ ಇಡೀ ಪ್ರಕರಣವನ್ನು ತಿರುಚಿ, ಯುವಕನನ್ನೇ ಅಪರಾಧಿಯನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.

        ದಲಿತ ಯುವಕ ಪ್ರತಾಪನಿಗೆ ಥಳಿಸಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಘಟನೆ ಜೂನ್ 2ರಂದೇ ನಡೆದದ್ದರೂ, ಈವರೆಗೆ ಕೇವಲ ಇಬ್ಬರು ಆರೋಪಿಗಳನ್ನು ಮಾತ್ರವೇ ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಸಾಕಷ್ಟು ಜನರ ಕೈವಾಡವೂ ಇರುವ ಸಾಧ್ಯತೆ ಇದ್ದು, ಅಮಾಯಕ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದು ಯಾಕೆ, ಆತನನ್ನು ಬೆತ್ತಲೆಯನ್ನಾಗಿ ಮಾಡಿ, ಕೈಗಳನ್ನು ಕಟ್ಟಿ ಹಾಕಿ ಮೆರವಣಿಗೆ ಮಾಡಿದ್ದು ಯಾಕೆಂಬ ಬಗ್ಗೆ ಸತ್ಯಾಸತ್ಯತೆಯೂ ಹೊರ ಬರಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

       ಘಟನೆ ನಡೆದು 10 ದಿನಗಳೇ ಕಳೆದರೂ ಅಲ್ಲಿನ ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಇಬ್ಬರನ್ನಷ್ಟೇ ಬಂಧಿಸಿರುವುದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ. ಹೀಗಾಗಿ ಅಲ್ಲಿನ ವೃತ್ತ ನಿರೀಕ್ಷಕರನ್ನು ವರ್ಗಾವಣೆ ಮಾಡಬೇಕು. ಇಡೀ ಪ್ರಕರಣವನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ, ಗುಂಡ್ಲುಪೇಟೆ ದಲಿತ ಯುವಕನ ಮೇಲೆ ಹಲ್ಲೆ, ದೌರ್ಜನ್ಯ, ಬೆತ್ತಲೆ ಮೆರವಣಿಗೆ ಪ್ರಕರಣದ ಎಲ್ಲ ಆರೋಪಿಗಳನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ವಿಜಯಮ್ಮ, ಕೋಗಲೂರು ಕುಮಾರ, ಪರಮೇಶ ಕೆಟಿಜೆ ನಗರ, ಮಂಜು ಕುಂದುವಾಡ, ನಾಗರಾಜ, ಜಿಗಳಿ ಹಾಲೇಶ, ಪ್ರದೀಪ, ಚೌಡಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap