ಸ್ವಚ್ಛ ಭಾರತಕ್ಕೆ ಹಾನಗಲ್ಲ ಅಪವಾದ

ಹಾನಗಲ್ಲ :

       ಹಾನಗಲ್ಲ ಪುರಸಭೆ ಸ್ವಚ್ಛ ಭಾರತಕ್ಕಾಗಿ ಏನೇನು ಯತ್ನ ಮಾಡುತ್ತಿದೆ, ಆದರೆ ಪಟ್ಟಣದಲ್ಲಿ ನಾಯಿ, ಹಂದಿ, ಬಿಡಾಡಿ ದನಗಳನ್ನು ನಿರ್ವಹಿಸುವಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದ್ದು ಸಾರ್ವಜನಿಕರಿ ಕೆಂಗಣ್ಣಿಗೆ ಗುರಿಯಾಗಿದೆ.

          ಹಾನಗಲ್ಲಿನಲ್ಲಿ ಹಂದಿ ಕಾಟ ತಪ್ಪಿಸಲು ಸಾರ್ವಜನಿಕರು ನೂರು ನೂರು ಬಾರಿ ಪುರಸಭೆ ಬಾಗಿಲು ಬಡಿದು ಮನವಿ ಮಾಡಿದ್ದಾರೆ. ಅಧಿಕಾರಿಗಳು ಎಲ್ಲದಕ್ಕೂ ಸೈ ಎನ್ನುತ್ತಾರೆ. ಆದರೆ ಹಂದಿಗಳು ಮಾತ್ರ ರಾಜಾರೋಷವಾಗಿ ಎಲ್ಲ ಬಡಾವಣೆಯಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ಹಂದಿ ಹಿಡಿಯುತ್ತಿರುವುದಾಗಿ ದಾಖಲೆಗಳಲ್ಲಿ ಮಾಹಿತಿ ನೀಡುತ್ತಿರುವ ಪುರಸಭೆ ಹಂದಿಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿರುವ ಬಗ್ಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಹಂದಿ ಹೊರ ಹಾಕಿದ್ದೇವೆ ಎನ್ನುತ್ತಾರೆ. ಆದರೆ ತಂಡೋಪ ತಂಡವಾಗಿ ಎಲ್ಲೆಂದರಲ್ಲಿ ಓಡಾಡುತ್ತಲೇ ಇವೆ. ಈಗಲಾದರೂ ಪುರಸಭೆ ಹಂದಿಮುಕ್ತ ಹಾನಗಲ್ಲಿಗೆ ಮುಂದಾಗುವುದೇ ಎಂದು ಕಾದು ನೋಡಬೇಕಾಗಿದೆ.

        ಇನ್ನೊಂದು ಸಮಸ್ಯೆ ಎಂದರೆ ಬಿಡಾಡಿ ದನಗಳು. ಪಟ್ಟಣದಲ್ಲಿ ವಿಶೇಷವಾಗಿ ಬಸ್ ನಿಲ್ದಾಣದ ಬಳಿ ಗುಂಪು ಗುಂಪಾಗಿ ತಮ್ಮ ಇರವನ್ನು ತೋರಿಸುವ ಬಿಡಾಡಿ ದನಗಳು, ಯಾರದು ಹೆದರಿಕೆ ಬೆದರಿಕೆ ಇಲ್ಲದೆ ವಾಸಿಸುತ್ತಿವೆ. ನಿರಂತರವಾಗಿ ರಸ್ತೆಯಲ್ಲಿ ಮಲಗಿರುವ ಈ ಬಿಡಾಡಿ ದನಗಳು ವಾಹನ ಚಾಲಕರಿಗೆ ಸವಾಲಾಗಿವೆ. ಪುರಸಭೆ ಚುನಾವಣೆಗೆ ಮೊದಲು ಈ ಬಿಡಾಡಿ ದನಗಳನ್ನು ಹಿಡಿದು ಮಹಾರಾಜಪೇಟೆ ಬಳಿ ಇರುವ ಪುರಸಭೆ ಜಾಗೆಯಲ್ಲಿ ಬಿಡಲಾಗಿತ್ತು. ಆದರೆ ಚುನಾವಣೆ ನಂತರ ಮತ್ತೆ ಅದೇ ಬಿಡಾಡಿ ದನಗಳು ಇನ್ನಷ್ಟು ದನಗಳೊಂದಿಗೆ ಹಾಜರಾಗಿವೆ.

         ಇದಕ್ಕೆ ಪುರಸಭೆ ಯಾವುದೆ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಅಹವಾಲಿಗೂ ಯಾವುದೆ ಫಲ ಸಿಕ್ಕಿಲ್ಲ.ಇನ್ನೂ ದೊಡ್ಡ ಸಮಸ್ಯೆ ಎಂದರೆ ಬಿಡಾಡಿ ನಾಯಿಗಳು. ಗುಂಪು ಗುಂಪಾಗಿ 20-30 ನಾಯಿಗಳು ಪಟ್ಟಣದಲ್ಲಿ ಓಡಾಡುತ್ತಿದ್ದು. ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಭಯ ಹುಟ್ಟಿಸುತ್ತವೆ. ಆದರೆ ಇದೆಲ್ಲವನ್ನೂ ಕಂಡ ಪುರಸಭೆ ಮಾತ್ರ ಜಾಣ ಮೌನ ವಹಿಸಿದೆ.

        ಈ ಬಗ್ಗೆ ಹತ್ತು ಹಲವು ಬಾರಿ ಪುರಸಭೆಗೆ ದೂರು ನೀಡಿದರು ಏನೂ ಪ್ರಯೋಜನವಾಗಿಲ್ಲ. ಕ್ರಮ ಜರುಗಿಸಲಾಗುತ್ತಿದೆ ಎಂಬ ಉತ್ತರ ಬಿಟ್ಟರೆ ಬಿಡಾಡಿ ದನ, ಬಿಡಾಡಿ ನಾಯಿ, ಹಂದಿಗಳಿಂದ ಹಾನಗಲ್ಲು ಮುಕ್ತವಾಗಲು ಶಕ್ತಿ ಕಾಲ ಇನ್ನೂ ಬಂದಿಲ್ಲವೆ ಎಂಬ ಚಿಂತೆ ಸಾರ್ವಜನಿಕರದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link