ಹಾನಗಲ್ಲನಲ್ಲಿ ಆಂಗ್ಲ ಮಾಧ್ಯಮ ಶಾಳೆಗೆ ದಾಖಲಾತಿ ಆರಂಭ..!!!

ಹಾನಗಲ್ಲ :
 
      ಹಾನಗಲ್ಲ ತಾಲ್ಲೂಕಿನಲ್ಲಿ ಪ್ರಾರಂಭವಾಗಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆಯಲಾಗಿದೆ. ಪ್ರವೇಶಾತಿಗೆ ಬಂದ ವಿದ್ಯಾರ್ಥಿನಿ ನಂದಿನಿ ಹರಿಜನ ಎಂಬುವ ಕುಮಾರಿಗೆ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಅವರು ಪ್ರವೇಶವನ್ನು ನೀಡಿದರು. 
       ಪ್ರವೇಶಾತಿ ಪಡೆದ ವಿದ್ಯಾರ್ಥಿನಿಯ ತಂದೆ ಆಟೋ ಚಾಲಕ ರಾಯಪ್ಪ ಹರಿಜನ ಮಾತನಾಡಿ ನಮ್ಮಂಥ ಬಡವರಿಗೆ, ಕೂಲಿ ಕಾರ್ಮಿಕರಿಗೆ ದೊಡ್ಡ ದೊಡ್ಡ ಪ್ರತಿಷ್ಟಿತ ಶಾಲೆಗಳಲ್ಲಿ ಡೊನೇಷನ್ ನೀಡಿ ಇಂಗ್ಲಿಷ್ ಶಿಕ್ಷಣ ಕೊಡಿಸುವುದು ತುಂಬಾ ಕಷ್ಟದಾಯಕವಾಗಿತ್ತು. ನಮ್ಮ ತಾಲ್ಲೂಕಿನಲ್ಲಿ ಸರ್ಕಾರವೇ ಪ್ರಾರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳಿಂದ ನಮ್ಮಂಥವರೂ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದು ತುಂಬಾ ಅನುಕೂಲವಾಗಿದೆ ಎಂದರು. 
        ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ಮಾತನಾಡಿ ಹಾನಗಲ್ ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಡೂರ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವರ್ದಿ, ಸರ್ಕಾರಿ ಉತನ್ನತೀಕರಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಬೆಳಗಾಲಪೇಟೆ ಹಾಗೂ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ಲನಲ್ಲಿ ಹೊಸದಾಗಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ತೆರೆಯಲಾಗಿದೆ. ಸಾರ್ವಜನಿಕರು, ಪೋಷಕರು ಈ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುವ ಮೂಲಕ ಅನುಕೂಲ ಮಾಡಿಕೊಳ್ಳಬೇಕೆಂದು ತಿಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ 
      ಬಿ.ಎಂ.ಬೇವಿನಮರದ ಮಾತನಾಡಿ ಆರ್ಥಿಕವಾಗಿ ಹಿಂದುಳಿದವರನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುವ ಮೂಲಕ ಮಕ್ಕಳಲ್ಲಿನ ಜ್ಞಾನದ ವಿಸ್ತಾರತೆಯನ್ನು ಹೆಚ್ಚಿಸಬೇಕು. ನಿಮ್ಮ ಸುತ್ತಮುತ್ತಲಿನವರಿಗೆ ಮಾಹಿತಿ ತಿಳಿಸುವ ಮೂಲಕ ಪ್ರಚಾರ ನೀಡಿ ಇತರರ ಮಕ್ಕಳೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯಲು ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
    ಮುಖ್ಯೋಪಾಧ್ಯಾಯ ಸಿ.ಆಯ್.ಕುನ್ನೂರ, ಶಿಕ್ಷಕರಾದ ಜಿ.ಎಂ.ಪಾಂಚಾಳ, ಎಸ್.ಎನ್.ಶಿವಣ್ಣನವರ, ಮಗುವಿನ ತಾಯಿ ಸಂಗೀತಾ ಹರಿಜನ ಸೇರಿದಂತೆ ಪೋಷಕರು ಹಾಜರಿದ್ದರು. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link