ಆರೋಗ್ಯ ಮೇಳ : ವ್ಯಾಪಕ ಪ್ರಚಾರ ಮೂಲಕ ಯಶಸ್ವಿಗೊಳಿಸಲು ಸೂಚನೆ

ಚಿತ್ರದುರ್ಗ:
   ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಪ.ಜಾತಿ, ಪ.ಪಂಗಡ ಮತ್ತು ಬುಡಕಟ್ಟು ಜನಾಂಗದ ಜನಸಂಖ್ಯೆ ಹೆಚ್ಚಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ, ಕಾರ್ಯಕ್ರಮ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ‘ಆರೋಗ್ಯ ಮೇಳ’ ವನ್ನು ಹಮ್ಮಿಕೊಂಡು, ವ್ಯಾಪಕ ಪ್ರಚಾರದ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಅವರು ಡಿಹೆಚ್‍ಒ ಅವರಿಗೆ ಸೂಚನೆ ನೀಡಿದರು.
  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಪ.ಜಾತಿ, ಪ.ಪಂಗಡ ಮತ್ತು ಬುಡಕಟ್ಟು ಜನಾಂಗದ ಜನಸಂಖ್ಯೆ ಹೆಚ್ಚಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳನ್ನು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಮೂಲಕ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರ ಸೂಚನೆ ನೀಡಿದೆ.  ಈ ದಿಸೆಯಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯ ಮೇಳ, ತಾಯಂದಿರ ಸಭೆ, ಪೌಷ್ಠಿಕ ಆಹಾರದ ಪ್ರಾತ್ಯಕ್ಷತಾ ಶಿಬಿರವನ್ನು ಆಯೋಜಿಸಬೇಕು ಎಂದು ಸಿಇಒ ಸತ್ಯಭಾಮ ಅವರು ಸೂಚನೆ ನೀಡಿದರು.
ಆರೋಗ್ಯ ಮೇಳ :
   ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆರೊಗ್ಯ ಮೇಳವನ್ನು ಆಯಾ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳೊಂದಿಗೆ ಸಮಾಲೊಚಿಸಿ ಕೂಡಲೆ ದಿನಾಂಕ ನಿಗದಿಪಡಿಸಿ ಆಯೋಜಿಸಬೇಕು.  ಇಲ್ಲಿ ನುರಿತ ತಜ್ಞ ವೈದ್ಯ ತಂಡದಿಂದ ವೈದ್ಯಕೀಯ ತಪಾಸಣೆ, ಚಿಕಿತ್ಸಾಶಿಬಿರ ಹಮ್ಮಿಕೊಳ್ಳಬೇಕು.  ಅಲ್ಲದೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಯೋಜನೆ ಮಾಹಿತಿ ಕೊಡಬೇಕು.
 
   ಮೇಳಕ್ಕೆ ಆಗಮಿಸುವವರು ತಪ್ಪದೆ ಆಧಾರ್ ಕಾರ್ಡ್ ತರುವಂತೆ ಸೂಚನೆ ನೀಡಿ, ಇದುವರೆಗೂ ಎಬಿಎಆರ್‍ಕೆ ಕಾರ್ಡ್ ಪಡೆಯದ ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಸ್ಥಳದಲ್ಲಿಯೇ ಎಬಿಎಆರ್‍ಕೆ ಕಾರ್ಡ್ ಸಿದ್ಧಪಡಿಸಿ, ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು.  ಆರೋಗ್ಯ ಮೇಳದಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಜನಪದ ತಂಡದಿಂದ ಮೇಳ ನಡೆಯುವ ಸ್ಥಳದಲ್ಲಿ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.  ಮೇಳದ ಅಂಗವಾಗಿ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ಹೃದಯ ರೋಗಗಳ ತಜ್ಞರು ಸೇರಿದಂತೆ ಎಲ್ಲ ತಜ್ಞ ವೈದ್ಯರು, ಸಿಬ್ಬಂದಿಗಳನ್ನು ನಿಯೋಜಿಸಿ, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನಡೆಸಬೇಕು.  ಮೇಳವನ್ನು ಯಶಸ್ವಿಗೊಳಿಸಲು ಗ್ರಾಮಗಳಲ್ಲಿ ಡಂಗುರ ಹಾಕಿಸಬೇಕು ಹಾಗೂ ಪೊಸ್ಟರ್, ಬ್ಯಾನರ್‍ಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸಿಇಒ ಅವರು ಸೂಚನೆ ನೀಡಿದರು. 
ತಾಯಂದಿರ ಸಭೆ :
     ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈಗಾಗಲೆ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವಂತೆ ಪಿಡಿಒ ಗಳಿಗೆ ಸೂಚನೆ ನೀಡಲಾಗಿದೆ.  ಇಂತಹ ಮಹಿಳಾ ಗ್ರಾಮಸಭೆಗಳಲ್ಲಿ ತಾಯಂದಿರು, ಗರ್ಭಿಣಿಯರು, ಕಿಶೋರಿಯರು ಸೇರಿದಂತೆ ಮಹಿಳಾ ಕೇಂದ್ರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.  ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ತಾಯಂದಿರ ಸಭೆಗಳನ್ನು ಏರ್ಪಡಿಸಿ, ಶಿಬಿರದಲ್ಲಿ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು.  
 
    ಶಿಬಿರದಲ್ಲಿ ತಾಯಂದಿರಿಗೆ, ಗರ್ಭಿಣಿಯರು, ಕಿಶೋರಿಯರಿಗೆ ಸೂಕ್ತ ಜಾಗೃತಿ ಮೂಡಿಸಬೇಕು.  ಗರ್ಭಿಣಿಯರ ಆರೈಕೆ, ಆಸ್ಪತ್ರೆಯಲ್ಲಿಯೇ ಹೆರಿಗೆ, ನವಜಾತ ಶಿಶುವಿನ ಆರೈಕೆ, ತಾಯಿ ಎದೆಹಾಲಿನ ಮಹತ್ವ, ಕಾಂಗರೂ ಮದರ್‍ಕೇರ್ ವ್ಯವಸ್ಥೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಪೌಷ್ಠಿಕ ಆಹಾರ ಕ್ರಮ, ಕುಟುಂಬ ಕಲ್ಯಾಣ ವಿಧಾನಗಳು, ವೈಯಕ್ತಿಕ ಸ್ವಚ್ಛತೆ, ಹೆಣ್ಣು ಮಗುವಿನ ಮಹತ್ವ, ಹೆಣ್ಣು ಮಗುವಿನ ಉಳಿಯುವಿಕೆ ಹಾಗೂ ಶಿಕ್ಷಣದ ಅಗತ್ಯತೆ ಕುರಿತಂತೆ ಅರಿವು ಮೂಡಿಸಬೇಕು.  
    ಪೌಷ್ಠಿಕ ಆಹಾರದಲ್ಲಿ ದವಸಧಾನ್ಯಗಳು, ಮೊಳಕಾಳುಗಳು, ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳ ಬಳಕೆ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಬೇಕು.  ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ಅಲ್ಲದೆ ಕಡಿಮೆ ವಯಸ್ಸಿನಲ್ಲಿಯೇ ತಾಯಂದಿರಾಗುವುದರಿಂದ, ಅಪೌಷ್ಠಿಕತೆಯೂ ಹೆಚ್ಚು ಇರುತ್ತದೆ.  ಇಂತಹ ಕಡೆಗಳಲ್ಲಿ ಮಹಿಳಾ ಜಾಗೃತಿ, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಅಪೌಷ್ಠಿಕತೆ ನಿವಾರಣೆ ಕುರಿತು ಹೆಚ್ಚಿನ ಅರಿವು ಮೂಡಿಸುವುದ ಅಗತ್ಯವಾಗಿದೆ.  ಶಿಬಿರಕ್ಕೆ ಆಗಮಿಸುವವರ ಹಾಜರಾತಿ ಹಾಗೂ ವಿವರವನ್ನು ತಪ್ಪದೆ ಪಡೆಯಬೇಕು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪೂರ್ವಭಾವಿಯಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ವ್ಯಾಪಕ ಪ್ರಚಾರ :
      ಮೂರೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು, ಬಸ್ ನಿಲ್ದಾಣ, ಶಾಲೆಗಳು, ತಾ.ಪಂ. ಕಚೇರಿ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಗೋಡೆ ಬರಹಗಳನ್ನು ವೈವಿಧ್ಯಮಯವಾಗಿ ಬರೆಯಿಸುವ ಮೂಲಕ, ರೇಡಿಯೋ ಜಿಂಗಲ್ಸ್, ಪತ್ರಿಕಾ ಪ್ರಕಟಣೆಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು.  ಜೊತೆಗೆ ಸಾಂಕ್ರಾಮಿಕ ರೋಗಗಳು, ಇತ್ತೀಚಿನ ಕೊರೊನಾ ವೈರಸ್ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪೋಸ್ಟರ್, ಬ್ಯಾನರ್‍ಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸಿಇಒ ಸತ್ಯಭಾಮ ಸೂಚನೆ ನೀಡಿದರು.
 
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಮಾತನಾಡಿ, ಪ್ರಸಕ್ತ ಸಾಲಿನ ಯೋಜನೆಯಂತೆ ಪ.ಜಾತಿ, ಪ.ಪಂಗಡ ಮತ್ತು ಬುಡಕಟ್ಟು ಜನಾಂಗದ ಜನಸಂಖ್ಯೆ ಹೆಚ್ಚಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ವಿಶೇಷ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
   ಇದಕ್ಕಾಗಿ ಜಿಲ್ಲೆಗೆ ಈ ವರ್ಷ 11.25 ಲಕ್ಷ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ. ಜಿಲ್ಲೆಯಲ್ಲಿ ಈಗಾಗಲೆ 2.80 ಲಕ್ಷ ಜನರಿಗೆ ಎಬಿಎಆರ್‍ಕೆ ಕಾರ್ಡ್‍ಗಳನ್ನು ವಿತರಿಸಲಾಗಿದೆ.  ಪ್ರತಿ ಆಶಾ ಕಾರ್ಯಕರ್ತೆಯರಿಗೆ ದಿನಂಪ್ರತಿ ಕನಿಷ್ಟ 5 ಜನರಿಗೆ ಎಬಿಎಆರ್‍ಕೆ ಕಾರ್ಡ್ ಮಾಡಿಸುವ ಗುರಿಯನ್ನು ನೀಡಲಾಗಿದ್ದು, ಶೀಘ್ರದಲ್ಲಿಯೇ ಜಿಲ್ಲೆಯ ಎಲ್ಲ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‍ನವರಿಗೆ ಎಬಿಎಆರ್‍ಕೆ ಕಾರ್ಡ್ ನೀಡುವ ಗುರಿ ಸಾಧನೆ ಮಾಡಲಾಗುವುದು ಎಂದರು.
 
   ಸಭೆಯಲ್ಲಿ ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಮ್ಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಭಾರತಿ ಬಣಕಾರ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆನಂದ್ ಹೆಚ್‍ಎಸ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ ಪೂಜಾರ್, ಜಾನಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap