ಚಳ್ಳಕೆರೆ
ರಾಜ್ಯದಲ್ಲಿಯೇ ಅತ್ಯಂತ ಅಭಿವೃದ್ಧಿಯತ್ತ ಸಾಗಿರುವ ಇಲ್ಲಿನ ನಗರಸಭೆ ನಗರದ ಕಸವನ್ನು ಸುಸಜ್ಜಿತವಾಗಿ ವಿಲೇವಾರಿ ಮಾಡುವ ದೃಷ್ಠಿಯಿಂದ ಸುಮಾರು 3.8 ಕೋಟಿ ವೆಚ್ಚದಲ್ಲಿ ವಿಶೇಷ ಕಸ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ಧಾರೆ.
ಅವರು ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ ಈಗಾಗಲೇ ಬಳ್ಳಾರಿ ರಸ್ತೆಯ ನಗರಸಭೆ ವ್ಯಾಪ್ತಿಯ ಕಸ ಸಂಗ್ರಹಣಾ ಘಟಕದ ಬಳಿ ಸುಮಾರು 4 ಎಕರೆ ಪ್ರದೇಶದಲ್ಲಿ ಈ ಘಟಕನವನ್ನು ಪ್ರಾರಂಭಿಸಲಿದ್ದು, ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಘಟಕದ ಪ್ರಾರಂಭಕ್ಕೆ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದಿದ್ಧಾರೆ. ಈ ಘಟಕ ಪ್ರಾರಂಭದಕ್ಕೆ ಕೇಂದ್ರ ಸರ್ಕಾರದ ಸ್ವಚ್ಚತಾ ಆಂದೋಲನ, ರಾಜ್ಯ ಸರ್ಕಾರ ಹಾಗೂ ನಗರಸಭೆಯ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಇತ್ತೀಚಿನ ದಿನಗಳಲ್ಲಿ ನಗರದ ಎಲ್ಲಾ 31 ವಾರ್ಡ್‍ಗಳಲ್ಲೂ ನಿರೀಕ್ಷೆಗೂ ಮೀರಿದ ಹೆಚ್ಚು ಕಸ ಸಂಗ್ರಹಣೆಯಾಗುತ್ತಿದ್ದು, ಸಂಗ್ರಹಣೆಯಾದ ಕಸವನ್ನು ವಿಲೇವಾರಿ ಮಾಡಿ. ಅದನ್ನು ಸದುಪಯೋಗದತ್ತ ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ನಗರದ ಜನತೆ ನಗರದ ಯಾವ ವಾರ್ಡ್‍ಗಳಲ್ಲೂ ಹೆಚ್ಚಿನ ಕಸದಿಂದ ತೊಂದರೆಗೀಡಾಗದೆ ಆರೋಗ್ಯವಂತರಾಗಲಿ ಎಂಬ ಸದುದ್ದೇಶ ಇದರಲ್ಲಿ ಅಡಗಿದೆ.
ಈ ಬೃಹತ್ ಯೋಜನೆಯನ್ನು ಚಳ್ಳಕೆರೆ ನಗರಸಭೆ ಇನ್ನು ಕೆಲವೇ ತಿಂಗಳಲ್ಲಿ ಆರಂಭಿಸಲಿದೆ. ನಗರಸಭಾ ಆಡಳಿತ ನಗರದ ಜನತೆಗೆ ಅವಶ್ಯವಿರುವ ಎಲ್ಲಾ ಮೂಲ ಭೂತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಯೋನ್ಮುಖವಾಗಲಿದೆ ಎಂದಿದ್ಧಾರೆ.
ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು ಮಾಹಿತಿ ನೀಡಿ, ಪ್ರತಿನಿತ್ಯ ನಗರದಾದ್ಯಂತ 21 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಪ್ರಸ್ತುತ ನಗರಸಭೆಯ ವಾಹನಗಳಲ್ಲಿ ಈ ಕಸ ಸಾಗಾಟ ನಡೆಯುತ್ತಿದ್ದು, ಈ ಯೋಜನೆಯಲ್ಲಿ ಹೊಸದಾಗಿ ಐದು ವಾಹನಗಳನ್ನು ಖರೀದಿಸಿ ಅವುಗಳ ಮೂಲಕ ಸಾಗಾಟ ಮಾಡಲಾಗುವುದು. ಕಸ ವಿಲೇವಾರಿ ಮೂರು ಹಂತದಲ್ಲಿ ನಡೆಯಲಿದೆ. ಪ್ಲಾಸ್ಟಿಕ್, ಒಣಕಸ, ಹಸಿಕಸ ಹೀಗೆ ವಿಂಗಡಿಸಲಾಗುತ್ತದೆ.
ಡಿಪಿಆರ್ ಯೋಜನೆಯ ಕಾಮಗಾರಿ ಇದಾಗಿದೆ. ಇದಕ್ಕಾಗಿಯೇ ಈಗ ಬೃಹದಾಕಾರದಲ್ಲಿ ಶೆಡ್ ನಿರ್ಮಿಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಸ ವಿಂಗಡಣೆಯ ಆಧುನಿಕ ಯಂತ್ರ ಇಲ್ಲಿಗೆ ರವಾನೆಯಾಗಲಿದ್ದು, ತಜ್ಞ ಇಂಜಿನಿಯರ್‍ಗಳು ಈ ಯಂತ್ರವನ್ನು ಅಳವಡಿಸುವರು. ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿಯನ್ನು ಸಹ ನೇಮಿಸಲಾಗುವುದು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಪ್ರಯೋಗವನ್ನು ಕೈಗೊಳ್ಳಲಾಗಿದೆ. ನಗರದ ನಾಗರೀಕರು ನಗರದ ಸ್ವಚ್ಚತೆ ಹಿನ್ನೆಲ್ಲೆಯಲ್ಲಿ ನಗರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ಧಾರೆ.
ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಪಿ.ಪಾಲಯ್ಯ, ತಿಪ್ಪೇಸ್ವಾಮಿ, ಸಂದೀಪ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
