ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆಯಲ್ಲಿ ಹೋಬಳಿಗೆ ಎರಡು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಗೊಳಿಸಬೇಕು ಎಂದು ಲೋಕಸಭೆ ಸದಸ್ಯ ಎ. ನಾರಾಯಣಸ್ವಾಮಿ ಹೇಳಿದರು.ನಗರದ ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಶಾಲೆಗಳ ಪಟ್ಟಿ ಮಾಡಬೇಕು. ಹೋಬಳಿಗೆ 2 ಶಾಲೆಗಳನ್ನು ಆಯ್ಕೆ ಮಾಡಿ, ಶಾಲೆಯಲ್ಲಿರುವ ಒಟ್ಟು ಮಕ್ಕಳು, ಅಗತ್ಯವಿರುವ ದುರಸ್ಥಿ ಕಾರ್ಯ, ಕಟ್ಟಡ ಕಾಮಗಾರಿ, ಗೋಡೆಗಳಿಗೆ ಬಣ್ಣ ಸೇರಿದಂತೆ ಕುಂದು ಕೊರತೆಗಳನ್ನು ಪಟ್ಟಿ ಮಾಡಿ, ಅದಕ್ಕೆ ಅವಶ್ಯವಿರುವ ಅನುದಾನ ಕುರಿತ ಕರಡು ವರದಿಯನ್ನು ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದು ಡಿಡಿಪಿಐಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ, ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ, ಜಿಲ್ಲೆಯ 6 ತಾಲ್ಲೂಕುಗಳಲ್ಲೂ ಅಭಿವೃದ್ಧಿಯಾಗಬೇಕಿರುವ ಶಾಲೆಗಳ ಪಟ್ಟಿ ತಯಾರಿಸಿ, ಸಂಪೂರ್ಣ ವರದಿಯನ್ನು ಸಲ್ಲಿಸಿದರೆ, ಶಾಲೆಗಳ ಅಭಿವೃದ್ಧಿಗೆ ಅವಶ್ಯವಿರುವ ಹಣವನ್ನು ಒದಗಿಸಿಕೊಡುವುದಾಗಿ ಹೇಳಿದರು.
ಬರುವ ಜೂನ್ ತಿಂಗಳೊಳಗೆ ಶಾಲೆಗಳ ಕಾಮಗಾರಿ ಮುಗಿದು, ಹೊಸ ಶಾಲೆಯಂತೆ ರೂಪತಾಳಿರಬೇಕು. ಉತ್ತಮ ಗುಣಮಟ್ಟದ ಗೋಡೆ, ಕೊಠಡಿ, ಕಾಂಪೌಂಡ್, ಬಣ್ಣ ಹಾಕಿಸಿ, ದೀರ್ಘ ಕಾಲ ಶಾಲೆ ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು. ಶಾಲೆ ಕಾಮಗಾರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಮರದ ದಿಮ್ಮಿಗಳನ್ನು ತೆಗೆಯಬಾರದು. ಶಾಲೆಗಳ ಆಯ್ಕೆಯಾಗಿ 15 ದಿನಗಳೊಳಗೆ ಕೆಲಸ ಪ್ರಾರಂಭಿಸಲಾಗುತ್ತದೆ. ಜಿಲ್ಲೆಯಲ್ಲಿ ಆದರ್ಶ ಶಾಲೆಗಳಿಗೆ ಆಯ್ಕೆಯಾದ ಎಲ್ಲಾ ಶಾಲೆಗಳಿಗೂ ಪ್ರತ್ಯೇಕ ಕಟ್ಟಡ ಕಟ್ಟಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿರುವ ಕಳಪೆ ರಸ್ತೆಗಳು ಹಾಗೂ ಸ್ಥಿತಿಗತಿ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕಗಳ ಕಾರ್ಯ ವೈಖರಿ, ಈಗಿನ ಸ್ಥಿತಿಗತಿ ಹಾಗೂ ಮಾದರಿ ಶಾಲೆಗಳ ಕುರಿತ ಸಮಗ್ರ ಮಾಹಿತಿಯನ್ನು ಒಂದು ವಾರದೊಳಗಾಗಿ ನೀಡಬೇಕು. ತಪ್ಪಿದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಹೊಳಲ್ಕೆರೆ ತಾಲ್ಲೂಕಿನ ಬಿದರಕೆರೆ ಶಾಲೆಯೊಂದರಲ್ಲಿ ಸಮರ್ಪಕ ಶೌಚಾಲಯವಿಲ್ಲ. ಇಲ್ಲಿನ ಶಿಕ್ಷಕರು ಸುಮಾರು 10 ವರ್ಷದಿಂದ ಕೆಲಸ ಮಾಡುತ್ತಿದ್ದರೂ, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡ ನಿರ್ಮಾಣವಾಗಬೇಕಿರುವ ಶಾಲೆಗಳು, ದುರಸ್ಥಿ ಕಾರ್ಯ, ಅವಶ್ಯವಿರುವ ಕೊಠಡಿಗಳು, ಕಾಂಪೌಂಡ್ ಬಗ್ಗೆ ಆದ್ಯತೆ ಮೇರೆಗೆ ವರದಿ ತಯಾರಿಸಿ ತಹಶೀಲ್ದಾರ್‍ಗಳಿಗೆ ನೀಡಬೇಕು.
ಈ ಕಾರ್ಯ ಒಂದು ವಾರದೊಳಗಾಗಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ರವಿಶಂಕರ್‍ರೆಡ್ಡಿ, ಶಾಲೆಗಳ ಪಟ್ಟಿ ಸಿದ್ಧವಿದೆ. ಜಿಲ್ಲೆಯಲ್ಲಿ 180 ಶಾಲೆಗಳಿದ್ದು, 273 ಕೊಠಡಿಗಳ ಅವಶ್ಯಕತೆಯಿದೆ ಎಂದರು.
ಸಭೆಯಲ್ಲಿ ಚಿತ್ರದುರ್ಗ ವ್ಯಾಪ್ತಿಯಲ್ಲಿರುವ ಹೋಬಳಿಗೆ 2 ಶಾಲೆಗಳ ಆಯ್ಕೆ, ನೀಲನಕ್ಷೆ ಕುರಿತ ಮಾಹಿತಿ ನೀಡಲು ಲೋಕೋಪಯೋಗಿ ಇಲಾಖೆಗೆ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಚಳ್ಳಕೆರೆ ವ್ಯಾಪ್ತಿಯಲ್ಲಿ ನಿರ್ಮಿತಿ ಕೇಂದ್ರ, ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಅವರಿಗೆ ಜವಬ್ದಾರಿ ವಹಿಸಲಾಯಿತು. ಸಭೆಯಲ್ಲಿ ಜಿ.ಪಂ ಕಾರ್ಯದರ್ಶಿ ಸಯ್ಯದ್ ಮಹಮ್ಮದ್ ಮುಬಿನ್, ಮುಖ್ಯ ಯೋಜನಾಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
