ಆರೋಗ್ಯವಂತನೇ ದೇಶದ ನಿಜವಾದ ಶ್ರೀಮಂತ: ನ್ಯಾ.ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ:

     ಹಣ ಒಡವೆ ಗಳಿಸಿಟ್ಟವನು ಶ್ರೀಮಂತನಲ್ಲ, ಆರೋಗ್ಯವಂತನೇ ನಿಜವಾದ ಶ್ರೀಮಂತ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕೃಷಿ ಮಾಡುವವರು ಎಲ್ಲರಿಗಿಂತಲೂ ಮಿಗಿಲು. ಕೃಷಿಕರೆಂದು ಮುಜುಗರಪಡುವುದು ಬೇಡ ಎಂದು ಹಿರಿಯ ಸಿವಿಲ್ ನ್ಯಾಯಾದೀಶೆ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷೆಯಾದ ಉಂಡಿ ಮಂಜುಳಾ ಶಿವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

     ಪಟ್ಟಣದ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕಿಯರ ವಸತಿನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೌಷ್ಟಿಕ ಆಹಾರ ಸಪ್ತಾಹ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಆಧುನಿಕ ಸೋಗಿನಲ್ಲಿ ಜಂಕ್ ಪುಡ್‍ಗೆ ಮೊರೆಹೋಗಿ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿರುವುದು ಆರೋಗ್ಯವಂತ ಸಮಾಜಕ್ಕೆ ಮಾರಕವಾಗಿದೆ. ಸಮತೋಲನೆಯ ಆಹಾರ ಪದ್ದತಿ ಅನುಸರಿಸಿ, ಹಣ್ಣುಗಳನ್ನು ನಿಸರ್ಗದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಿ ಎಂದು ಸಲಹೆ ನೀಡಿದರು.

     ದಿಕ್ಕುತಪ್ಪಿಸುವ ಜಾಹಿರಾತುಗಳೂ ಅಪೌಷ್ಟಿಕತೆಗೆ ಒಂದು ಪಾತ್ರವಹಿಸಿವೆ. ಮಕ್ಕಳು ಜಾಹಿರಾತಿಗೆ ಮರುಳಾಗಿ ಪೋಷಕರನ್ನು ಪೀಡಿಸಿ ಪಡೆಯುವುದು ಮಕ್ಕಳ ಸದೃಢಕಾಯಕ್ಕೆ ಕೊರತೆಯನ್ನುಂಟು ಮಾಡುತ್ತಿದೆ. ದೈಹಿಕ ಶ್ರಮವಿಲ್ಲದೆ ಒತ್ತಡದ ಬದುಕು ಅನಾರೋಗ್ಯಕ್ಕೆ ನಾಂದಿಯಾಗಿದೆ.

     ಕೆಮಿಕಲ್ ಬಳಸಿ ಬಲವಂತದಿಂದ ಅವಧಿಗೂ ಮುನ್ನ ಹಣ್ಣುಗಳನ್ನು ಮಾಗಿಸುವ ವ್ಯವಸ್ಥೆಗೆ ಕಡಿವಾಣ ಅಗತ್ಯವಿದೆ. ರೈತರೂ ಆಹಾರ ದಾನ್ಯ ತರಕಾರಿಯಿಂದ ದೂರ, ಮೆಕ್ಕೆಜೋಳ ಬಲು ಜೋರ ಎನ್ನುವಂತೆ ವಾಣಿಜ್ಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಯುವತಿಯರೂ ಕೂಡ ಸಪೂರ ದೇಹಕ್ಕಾಗಿ ಆಹಾರ ನಿಯಂತ್ರಣ ಮಾಡುವುದು ಅನಾರೋಗ್ಯಕ್ಕೆ ದಾರಿ ಮಾಡಿದೆ. ಜೀವನ ಶೈಲಿಯ ಬದಲಾವಣೆ ಅಗತ್ಯವಿದೆ. ದೇಹ ಸದೃಢವಿದ್ದರೆ ಮನಸು ಸದೃಢವಾಗುತ್ತದೆ ಎಂದರು.

     ಡಾ.ಮಹೇಶ್ ಮಾತನಾಡಿ. ಬ್ರೂಣದಿಂದ ವೃದ್ಯಾಪ್ಯದವರೆಗೂ ಅಪೌಷ್ಟಿಕತೆ ಸಮಸ್ಯೆಯಿದೆ. ಸತ್ವಯುತ ಆಹಾರವನ್ನು ಗರ್ಭಾವಸ್ಥೆಯಲ್ಲೆ ಪ್ರಾರಂಭಿಸುವುದು ಅಗತ್ಯ ಕ್ರಮವಾಗಿದೆ. ಬಾಯಿಗೆ ರುಚಿ ಹೆಚ್ಚುಮಾಡುವ ಪದಾರ್ಥಗಳು ಅಪಾಯಕಾರಿ ಎನ್ನುವುದನ್ನು ಅರಿತು ಆಹಾರ ಪದ್ದತಿ ಅನುಸರಿಸಿ. ದ್ಯಾನ ಮತ್ತು ದೈಹಿಕ ಶ್ರಮಕ್ಕೆ ಆದ್ಯತೆ ನೀಡಿ, ಕಟ್ಟುನಿಟ್ಟಿನ ಆಹಾರ ಪದ್ದತಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದರು.

    ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ. ಹಿಂದೆ ಆಹಾರದ ಕೊರತೆಯಿಂಧ ಅಪೌಷ್ಟಿಕತೆ ತಲೆದೂರಿತ್ತು. ಆಧುನಿಕತೆಯಲ್ಲಿ ಅತಿಯಾದ ಆಹಾರ ಸೇವನೆಯಿಂದ ಅನಾರೋಗಿಗಳಾಗುತ್ತಿದ್ದಾರೆ. ಹಸಿವೆಗಿಂತ ಮುನ್ನ ಸಮಯ ನೋಡಿ ತಿನ್ನುವ ಪ್ರಾಣಿ ಮಾನವನೊಬ್ಬನೇ. ಸ್ಪರ್ಧಾತ್ಮಕ ನವೀನತೆಯ ಯುಗದಲ್ಲಿ ಕೃಷಿಕ ಕಷ್ಟಪಡುತ್ತಿರುವುದರಿಂದ ಕಡಿಮೆ ಆದಾಯದ ಆಹಾರ ಪದಾರ್ಥಗಳನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾನೆ. ಸರ್ಕಾರ ಬೆಂಬಲಬೆಲೆ ನೀಡುವುರಿಂದ ಇಂತಹ ಅಪೌಷ್ಟಿಕ ಸಮಸ್ಯೆಗೆ ನಾಂದಿಹಾಡಲು ಸಾದ್ಯ ಎಂದರು.

     ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾದೀಶೆ ಹಾಗೂ ತಾಲೂಕು ಕಾನೂನು ಸಮಿತಿ ಕಾರ್ಯದರ್ಶಿ ಬಿ.ಜಿ.ಶೋಭಾ, ವಕೀಲರಾದ ಇದ್ಲಿರಾಮಪ್ಪ, ವಿ.ಜಿ.ಪ್ರಕಾಶ್‍ಗೌಡ, ಸಮಾಜ ಕಲ್ಯಾಣಾಧಿಕಾರಿ ಆನಂದ್ ವೈ.ಡೊಳ್ಳಿನ, ನಿಲಯಪಾಲಕರಾದ ಬಸವರಾಜ್ .ಎನ್.ಜಿ, ಅಮರೇಶ್, ಸುನೀತಾ ಹಾಗೂ ಇತರರು ಉಪಸ್ಥಿತರಿದ್ದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap