ತುಮಕೂರು:
ಅಕ್ಟೋಬರ್ ತಿಂಗಳು ಬಂದಿತೆಂದರೆ ಕೆಲವು ವಸ್ತುಗಳಿಗೆ ವಿಪರೀತ ಡಿಮ್ಯಾಂಡ್ ಶುರುವಾಗುತ್ತದೆ. ಈ ತಿಂಗಳಿನಲ್ಲಿ ಪಿತೃಪಕ್ಷ, ಮಹಾಲಯ ಅಮಾವಾಸ್ಯೆ, ಆಯುಧ ಪೂಜಾ, ಮಹಾನವಮಿ ಹಬ್ಬಗಳು ಸಾಲುಗಟ್ಟಿ ಬರುವ ಕಾರಣ ಕುರಿ, ಮೇಕೆಗಳಿಗೆ ವಿಪರೀತ ಡಿಮ್ಯಾಂಡ್.
ಅಕ್ಟೋಬರ್ ಆರಂಭದಲ್ಲಿಯೇ ಪಿತೃಪಕ್ಷದ ಆಚರಣೆಗಳು ಆರಂಭವಾಗುತ್ತವೆ. ಅ.8 ರಂದು ಮಹಾಲಯ ಅಮಾವಾಸ್ಯೆ ನಡೆಯಿತು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಿರಿಯರ ಹಬ್ಬಗಳು ನಡೆದವು. ಅಂದಿನಿಂದ ಶುರುವಾದ ಬೇಡಿಕೆ ಇಂದಿಗೂ ಮುಂದುವರೆದಿದೆ. ಈ ಹಬ್ಬಗಳಿಗಾಗಿಯೇ ಕೆಲವರು ಕುರಿ, ಮೇಕೆಗಳನ್ನು ಭರ್ಜರಿ ಹುಲುಸಾಗಿ ಸಾಕಿರುತ್ತಾರೆ. ಈ ಹಬ್ಬದ ವೇಳೆಗೆ ಮೇಕೆ, ಹೋತ, ಟಗರು ಮೈತುಂಬಾ ಮಾಂಸ ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣಿಸುತ್ತವೆ. ಹೀಗಾಗಿ ಕೆಲವು ಮರಿಗಳು 25 ಸಾವಿರ ರೂ.ಗಳ ತನಕ ಮಾರಾಟವಾಗುತ್ತವೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿಧ ಜಾನುವಾರು ಸಂತೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಹಿಂದೆಲ್ಲಾ 5 ಸಾವಿರ ರೂ.ಗಳಿಗೆ ಒಂದೊಂದು ಮೇಕೆ ಅಥವಾ ಕುರಿ ಸಿಗುತ್ತಿದ್ದವು. ಈಗ 5 ಸಾವಿರ ರೂ.ಗಳಿಗೆ ಬೆಲೆಯೇ ಇಲ್ಲವಾಗಿದೆ. ಕನಿಷ್ಠ ಎಂದರೆ 8 ಸಾವಿರ ರೂ.ಗಳನ್ನು ಹೊಂದಿಸಿಕೊಂಡಿರಬೇಕು. 10 ಸಾವಿರ ರೂ.ಗಳ ಮೇಲಷ್ಟೇ ಸ್ವಲ್ಪ ಮಟ್ಟಿನ ವ್ಯವಹಾರ. ಅದರೊಳಗೆ ವ್ಯಾಪಾರ ಖರೀದಿ ಅಷ್ಟಕಷ್ಟೆ ಎನ್ನುವಂತಾಗಿದೆ.
ಜಿಲ್ಲೆಯ ಕೆಲವು ಕಡೆ ಆಯುಧ ಪೂಜಾ ದಿವಸದಂದೇ ಹಿರಿಯರ ಹಬ್ಬ ಆಚರಣೆ ಮಾಡುವುದುಂಟು. ಹೀಗಾಗಿ ಆಯುಧ ಪೂಜೆಯ ದಿನದಂದು ಮಾಂಸಾಹಾರ ಪೂಜೆ ಮತ್ತು ಸೇವನೆ ಭರ್ಜರಿಯಾಗಿಯೇ ನಡೆಯುತ್ತದೆ. ಒಂದು ಕಡೆ ಹಿರಿಯರ ಪೂಜೆ, ಮತ್ತೊಂದು ಕಡೆ ಆಯುಧ ಪೂಜೆ ಅಂಗವಾಗಿ ಬೋರ್‍ವೆಲ್, ಟ್ರಾಕ್ಟರ್, ವಾಹನಗಳು, ಮನೆಯಲ್ಲಿನ ಆಯುಧಗಳು ಇತ್ಯಾದಿಗಳಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ. ಇದಕ್ಕಾಗಿ ಕುರಿ, ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಇದು ಒಂದು ಪದ್ಧತಿಯಾಗಿಯೇ ಮುಂದುವರೆದುಕೊಂಡು ಬಂದಿದೆ. ಹೀಗಾಗಿ ಆಯುಧ ಪೂಜೆ ಎಂದರೆ ಕುರಿ, ಕೋಳಿಗಳಿಗೆ ವಿಪರೀತ ಡಿಮ್ಯಾಂಡ್ ಎನ್ನುವಂತಾಗಿದೆ.
ಕೆಲವು ಕಡೆ ಸಾಮೂಹಿಕವಾಗಿ ಕುರಿ, ಮೇಕೆ ಮರಿಗಳನ್ನು ಕಡಿದು ಪಾಲು ಹಾಕಿಕೊಳ್ಳುವ ಸಂಪ್ರದಾಯವಿದೆ. ಅಂದರೆ, ಒಂದೇ ಗ್ರಾಮದಲ್ಲಿ ಎರಡು ಮೂರು ಗುಂಪುಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ಮರಿಗಳನ್ನು ಕಡಿಯಲಾಗುತ್ತದೆ. ಅವರವರ ಶಕ್ತಾನುಸಾರ ಹಣ ಕೊಟ್ಟು ಮಾಂಸ ಪಡೆಯುತ್ತಾರೆ. ಒಂದೊಂದು ಗುಡ್ಡೆ ಹಾಕಿ ಆ ಗುಡ್ಡೆಯ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದನ್ನು ಗುಡ್ಡೆ ಬಾಡು ಎಂತಲೂ ಕರೆಯುತ್ತಾರೆ. ಆಯುಧ ಪೂಜೆ, ಯುಗಾದಿ ಮಾರನೇ ದಿನದ ವರ್ಷದಡಕು ಸಂದರ್ಭಗಳಲ್ಲಿ ಈ ತರಹದ ಪದ್ಧತಿ ಹೆಚ್ಚು ಚಾಲ್ತಿಯಲ್ಲಿರುತ್ತದೆ.
ಮಾಂಸಾಹಾರ ಸೇವನೆ ಮಾಡುವ ಜನತೆ ಈ ರೀತಿ ಕುರಿ, ಕೋಳಿಗಳ ಮೊರೆ ಹೋದರೆ ಸಸ್ಯಹಾರಿಗಳು ತಮ್ಮದೇ ಆದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಆಯುಧಗಳಿಗೆ ಬಲಿ ಕೊಡುವ ಸಂಪ್ರದಾಯವನ್ನು ಅವರು ಪಾಲಿಸುವುದಿಲ್ಲ. ತಿನ್ನುವ ಮತ್ತು ತಿನ್ನದೇ ಇರುವ ಜನರ ನಂಬಿಕೆಗಳ ಆಧಾರದ ಮೇಲೆ ಈ ಹಬ್ಬಗಳು ನಡೆದುಕೊಂಡು ಬರುತ್ತವೆ.
ಅಂತೂ ಅಕ್ಟೋಬರ್ ತಿಂಗಳು ಕುರಿ, ಮೇಕೆ ಸಾಕಿದವರಿಗೆ ಒಂದಷ್ಟು ಲಾಭದಾಯಕ ಎಂದೇ ಹೇಳಬಹುದು. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಗ್ರಾಮೀಣ ಪ್ರದೇಶದಲ್ಲಿ ಕುರಿ, ಸಾಕುವವನು ಮಾರುಕಟ್ಟೆಗಳಲ್ಲಿ 10 ರಿಂದ 15 ಸಾವಿರ ರೂ.ಗಳಿಗೆ ಒಂದನ್ನು ಮಾರಾಟ ಮಾಡಬಹುದು. ಇದನ್ನೇ ಕೊಂಡುಕೊಳ್ಳುವ ದಲ್ಲಾಳಿಗಳು ಅಥವಾ ನಗರ ಪ್ರದೇಶದ ಮಾಂಸದ ಮಂಡಿಗಳವರು ಅದರಲ್ಲಿ ಎರಡು ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. 15 ಸಾವಿರ ರೂ.ಗಳಿಗೆ ಒಂದು ಕುರಿಯನ್ನು ಖರೀದಿಸಿದರೆ ಮಂಡಿಗಳಲ್ಲಿ ಅವರು 30 ಸಾವಿರ ರೂ.ಗಳವರೆಗೂ ಸಂಪಾದಿಸುತ್ತಾರೆ.
ಕೆ.ಜಿ. ಮಾಂಸದ ಬೆಲೆ ಈ ಸಂದರ್ಭದಲ್ಲಿ ಏರಿಕೆಯೂ ಆಗುತ್ತದೆ. ಹಿಂದೆಲ್ಲಾ 350 ರಿಂದ 400 ರೂ.ಗಳವರೆಗೆ ಇದ್ದ ಪ್ರತಿ ಕೆ.ಜಿ. ಮಾಂಸದ ಬೆಲೆ ಇತ್ತೀಚಿನ ದಿನಗಳಲ್ಲಿ 500 ರೂ.ಗಳಷ್ಟಾಗಿದೆ. ಬೇಡಿಕೆಯ ಅಗತ್ಯತೆಯನ್ನು ನೋಡಿಕೊಂಡು 500 ರೂ.ಗಳಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರೂ ಇದ್ದಾರೆ. ಈ ಬೆಲೆಯನ್ನು ಗಮನಿಸಿದರೆ ಕುರಿಗಾಹಿಗಳಿಂದ ಖರೀದಿಸುವ ಒಂದು ಮೇಕೆ ಅಥವಾ ಕುರಿ ಮಾಂಸದ ಮಂಡಿಯವನಿಗೆ ಅಥವಾ ದಲ್ಲಾಳಿಗಳಿಗೆ ಉತ್ತಮ ವ್ಯವಹಾರವನ್ನಂತೂ ಗಿಟ್ಟಿಸಿಕೊಡುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ