ಹುಳಿಯಾರು:
ಅತಿಯಾದ ಮಳೆಯಿಂದ ಹುಳಿಯಾರು ಹೋಬಳಿಯ ಯಳನಾಡು ಭಾಗದಲ್ಲಿ ರಾಗಿ ಬೆಳೆ ಮುರುಟಿ ಹೋಗುತ್ತಿದೆ. ಕಳೆದ ವಾರ ಸುರಿದ ಮಳೆಗೆ ರಾಗಿ ಸೇರಿದಂತೆ ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.ರೈತರು ಕೊಯ್ಲು ಮಾಡಿದ ರಾಗಿ ಬೆಳೆ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ. ತೆನೆ ಭರ್ತಿ ಹಾಲು ತುಂಬಿದ ರಾಗಿ ಮೊಳಕೆ ಒಡೆಯುತ್ತಿದೆ. ಮೋಡದ ವಾತಾವರಣಕ್ಕೆ ರಾಗಿ ಫಂಗಸ್‍ನಿಂದಲೂ ನಲುಗಿದೆ. ಕಟಾವು ಮಾಡಿದ ರಾಗಿ ಬೆಳೆಯನ್ನು ಕಂತೆ ಕಟ್ಟಿ ಗುಡ್ಡೆ ಹಾಕುವುದಕ್ಕೂ ಮಳೆ ಬಿಡುವು ಕೊಡುತ್ತಿಲ್ಲ.
ಸಾಕಷ್ಟು ರೈತರಿಗೆ ರಾಗಿ ಕಟಾವು ಮಾಡುವುದಕ್ಕೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬಹುಮುಖ್ಯವಾಗಿ ಒಂದೇ ಜಮೀನಿನಲ್ಲಿ ಕೆಲ ತೆನೆಗಳು ಒಣಗಿದ್ದರೆ ಕೆಲ ತೆನೆಗಳು ಇನ್ನೂ ಹಸಿಯಾಗಿದ್ದು ಕೊಯ್ಲೆಗೆ ತೊಡಕಾಗಿರುವ ಪ್ರಕರಣವೂ ಇದೆ.ದಶಕಗಳ ಹಿಂದೆಯೇ ಕೈ ಬಿಟ್ಟಿದ್ದ ಸಿರಿ ಧಾನ್ಯ ಬೆಳೆಯನ್ನು ಸರ್ಕಾರದ ಪ್ರೋತ್ಸಾಹಧನದ ಉತ್ತೇಜನದಿಂದ ತಾಲೂಕಿನ ಬಹುತೇಕ ಕಡೆ ಸಾಮೆ, ಸಜ್ಜೆ, ನವಣೆ, ಕೊರಲೆ ಬಿತ್ತಿದ್ದರು. ಆದರೆ ನಿತ್ಯ ಸುರಿದ ಮಳೆಗೆ ಸಾಮೆ ಬೆಳೆಯಂತೂ ಬಹುಪಾಲು ನೆಲಕ್ಕೆ ಬಿದ್ದು ಕಾಳು ಮಣ್ಣುಪಾಲಾಗಿದೆ. ಇತರೆ ಸಿರಿಧಾನ್ಯಗಳು ಉತ್ತಮ ಇಳುವರಿ ಬಂದಿದ್ದರೂ ಸಹ ಮಳೆ ಬಿಡುವು ನೀಡದೆ ಸುರಿಯುತ್ತಿರುವುದರಿಂದ ತೆನೆಯಲ್ಲೇ ಮೊಳಕೆ ಹೊಡೆಯುತ್ತಿದೆ. ಕೆಲವೆಡೆ ಕೊಳೆಯುತ್ತಿವೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.
ಮುಂಗಾರಿನಲ್ಲಿ ಮಳೆ ಇಲ್ಲದೆ ಯಾವ ಬೆಳೆಯೂ ಕೈಹಿಡಿಯಲಿಲ್ಲ. ಈಗ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದೆ. ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ರೈತರು ಸೋತು ಹೋಗಿದ್ದಾರೆ. ಜಾನುವಾರುಗಳ ಮೇವಿಗೆ ಹುಲ್ಲು, ಜನರ ಆಹಾರಕ್ಕೆ ರಾಗಿ ದೊರಕುತ್ತದೆ ಎಂದು ಬಾವಿಸಲಾಗಿತ್ತಾದರೂ ರೈತರು ನಿರಿಕ್ಷಿಸಿದ ಮಟ್ಟಕ್ಕೆ ಮೇವು, ರಾಗಿ ಇಲ್ಲದಾಗಿದೆ. ಅಲ್ಲದೆ ಕಾಳು ಕಟ್ಟುವ ಸಮಯದಲ್ಲಿ ಮೋಡ ಕಟ್ಟಿದ್ದರಿಂದ ಕೆಲವು ಜಮೀನಿನಲ್ಲಿ ರಾಗಿ ಸಮರ್ಪಕವಾಗಿ ಕಾಳು ಕಟ್ಟದೆ ಜೊಳ್ಳಾಗಿದೆ.
ಒಟ್ಟಾರೆ ಮಳೆ ರೈತನ ಬದುಕಿನಲ್ಲಿ ಜೂಜಾಡುತ್ತದೆ ಎನ್ನುವುದಕ್ಕೆ ಈಗಿನ ರೈತನ ಪರಿಸ್ಥಿತಿ ನಿದರ್ಶನವಾಗಿದೆ. ಸದಸ್ಯಕ್ಕೆ ಈಗೇನೋ ಮಳೆ ಬಿಡುವು ಕೊಟ್ಟಿದ್ದು ರೈತರು ಈಗಾಗಲೇ ರಾಗಿ ಕಟಾವು ಕಾರ್ಯ ಆರಂಭಿಸಿ ರಾಗಿ ಕುಯ್ದು ಹೊಲದ್ಲಲೇ ದಾಸ್ತಾನು ಮಾಡುತ್ತಿದ್ದು ಈ ಸಂದರ್ಭದಲ್ಲಿ ಮಳೆ ಬಾರದಿರಲಿ ಎಂದು ದೇವರನ್ನು ಕೈ ಮುಗಿದು ಬೇಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ