ಕಾರಾಗೃಹಗಳ ಸೌಲಭ್ಯಗಳ ಮಾಹಿತಿ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು

     ರಾಜ್ಯದ ಕಾರಾಗೃಹಗಳಿಗೆ ಒದಗಿಸಲಾಗಿರುವ ಮೂಲಭೂತ ಸೌಕರ್ಯಗಳು, ಮಹಿಳಾ ಕೈದಿಗಳು ಹಾಗೂ ಮಕ್ಕಳಿಗೆ ಪೂರೈಸುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

      ಕಾರಾಗೃಹಗಳಲ್ಲಿ ಮಿತಿಮೀರಿದ ಕೈದಿಗಳ ಸಂಖ್ಯೆ ಹಾಗೂ ಮಹಿಳಾ ಕೈದಿಗಳು , ಅವರೊಂದಿಗಿರುವ ಮಕ್ಕಳಿಗೆ ಸೌಲಭ್ಯಗಳ ಕೊರತೆ ಕುರಿತ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಚ್. ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

       ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳ ಹೆರಿಗೆ ವ್ಯವಸ್ಥೆ, ಅವರೊಂದಿಗೆ ವಾಸವಿರುವ ಮಕ್ಕಳ ಚಿಕಿತ್ಸೆಗೆ, ಶೌಚಾಲಯಗಳು ಹಾಗೂ ಸ್ನಾಹಗೃಹಗಳ ಸಂಖ್ಯೆ, ಕೈದಿಗಳಿಗೆ ಪೂರೈಕೆಯಾಗುವ ಆಹಾರದ ಗುಣಮಟ್ಟ ಹಾಗೂ ಕಾರಾಗೃಹಗಳ ಭೇಟಿಯ ಸಮಯ ನಿಗದಿ ಕುರಿತು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ಜೊತೆಗೆ, ಜೈಲಿನಲ್ಲಿರುವ ಮಾನಸಿಕ ಅಸ್ವಸ್ಥರ ಕುರಿತ ಅಂಕಿ ಅಂಶಗಳು ಹಾಗೂ 2017ರ ಮಾನಸಿಕ ಆರೋಗ್ಯ ಸಂರಕ್ಷಣಾ ಕಾಯ್ದೆಯ ಅನುಷ್ಠಾನದ ವಿವರಗಳನ್ನು 10 ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.

        ಇದಕ್ಕೂ ಮುನ್ನ ರಾಜ್ಯ ಸರ್ಕಾರ, ಜೈಲಿನಲ್ಲಿರುವ ಹೆಚ್ಚುವರಿ ಕೈದಿಗಳಿಗೆ ಹೊಸ ಕಾರಾಗೃಹಗಳನ್ನು ಸ್ಥಾಪಿಸಲು 2-3 ವರ್ಷಗಳ ಕಾಲಾವಕಾಶದ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿತ್ತು.ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.

ಹಿನ್ನೆಲೆಯೇನು?

       ದೇಶದ ಹಲವು ಕಾರಾಗೃಹಗಳ ದುಸ್ಥಿತಿ ಹಾಗೂ ಮಿತಿಮೀರಿದ ಕೈದಿಗಳನ್ನು ಇರಿಸಿರುವ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2018ರ ಮೇ 8ರಂದು, ಈ ಸಂಬಂಧ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಎಲ್ಲಾ ರಾಜ್ಯ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link