ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ: ಹೈಕೋರ್ಟ್

ಬೆಂಗಳೂರು

     ಫೇಸ್ ಬುಕ್ ನಲ್ಲಿ ಜೆಡಿಎಸ್ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ವ್ಯಕ್ತಿಯನ್ನು ಬಂಧಿಸಿದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

      ಜೆಡಿಎಸ್‌ ಮುಖಂಡರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ ಆರೋಪದಡಿ, ‘ಟ್ರೋಲ್‌ ಮಗಾ‘ ಫೇಸ್‌ಬುಕ್‌ ಪುಟದ ಅಡ್ಮಿನ್‌ ಜಯಕಾಂತ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆಯೇ ಎಂದು ಕಿಡಿಕಾರಿತು.

     ಕರ್ನಾಟಕವೇನು ಪೊಲೀಸ್ ರಾಜ್ಯವಾಗಿದೆಯೇ. ಜನಸಾಮಾನ್ಯರು ನಿರ್ಭಯವಾಗಿ ಓಡಾಡಲೂ ಭಯಪಡುವಂತಹ ಸ್ಥಿತಿ ಇದೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ನೀಡಿದರು.

      ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅಧೀನ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದ್ದರೂ ಸಹ ಅದೇ ಆರೋಪಕ್ಕೆ ಮತ್ತೊಂದು ದೂರು ದಾಖಲಿಸಿ ಏಕೆ ಬಂಧಿಸಬೇಕಿತ್ತು? ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.

        ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಹಸ್ತಕ್ಷೇಪ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಾಲ ಕಾಲಕ್ಕೆ ನ್ಯಾಯಾಲಯ ಆದೇಶ ನೀಡಿದರೂ ಪೊಲೀಸರು ಬೆಲೆ ಕೊಡೋದಿಲ್ಲ, ಕಳೆದ ವಾರವಷ್ಟೇ ಡಿಸಿಪಿಯನ್ನು ಕೋರ್ಟ್‌ಗೆ ಕರೆಸಿ ಸೂಚನೆ ನೀಡಿದ್ದರೂ ಪೊಲೀಸರ ಪ್ರವೃತ್ತಿ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

       ಜೆಡಿಎಸ್ ಘಟಕ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಟ್ರೋಲ್ ಮಗ ಪುಟದಲ್ಲಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕಾರಿ ಹಾಗೂ ಜಾತಿನಿಂದನೆ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಪುಟದ ಆಡ್ಮಿನ್ ಜಯಕಾಂತ್ ಜೂ.17ರಂದು ನಿರೀಕ್ಷಣಾ ಜಾಮೀನು ಪಡೆದಿದ್ದರು.

     ಆದರೆ ಮತ್ತೆ ಜೂ.23ಕ್ಕೆ ಅದೇ ಫೇಸ್‌ಬುಕ್ ಪುಟದ ಕುರಿತು ಇನ್ನೊಂದು ದೂರನ್ನು ಜೆಡಿಎಸ್‌ನ ಐಟಿ ಘಟಕ ಸಲ್ಲಿಸಿತ್ತು. ಅದನ್ನು ಆಧರಿಸಿ ಜಯಕಾಂತ್ ಅವರನ್ನು ಬಂಧಿಸಿ ಇಟ್ಟುಕೊಳ್ಳಲಾಗಿದೆ. ಇದು ಕಾನೂನು ಬಾಹಿರ ಹಾಗಾಗಿ ಪ್ರಕರಣ ರದ್ದು ಮಾಡಬೇಕು ಕೂಡಲೇ ಅರ್ಜಿದಾರರನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap