ಬೆಂಗಳೂರು:
ವಿಧಾನಸಭಾ ಚುನಾವಣೆಯಲ್ಲಿ ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ನಂತರ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ತುಮಕೂರು ಕ್ಷೇತ್ರದ ಲೋಕಸಭೆ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಯಡಿಯೂರಪ್ಪ ಭೇಟಿ ಮಾಡಿರುವುದು ಕೂತೂಹಲ ಕೆರಳಿಸಿದೆ. ಭೇಟಿ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಹಾಜರಿದ್ದು ಸೋಮಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂದು ಬಿಎಸ್‌ವೈ ಬಳಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಜಿ.ಎಸ್.ಬಸವರಾಜು ಅವರು ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿರುವುದರಿಂದ ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಪುನರುಚ್ಚರಿಸಿದರು.
ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ನಾಯಕರ ಜತೆ ಯಾವುದೇ ಮುನಿಸಿಲ್ಲ. ಇವೆಲ್ಲ ಮನೆಯ ಜಗಳ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು. ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದೇ ಗುರಿ. ತುಮಕೂರು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಮಾತುಕತೆಯೂ ನಡೆದಿಲ್ಲ. ಪಕ್ಷದ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುವೆ ಎಂದರು.
ಶೋಭಾ ಕರಂದ್ಲಾಜೆ ವಿರುದ್ಧ ರಾಜಕೀಯ ಷಡ್ಯಂತ್ರ, ಮೂರು ದಿನದಲ್ಲಿ ಬಿಜೆಪಿ ಮೊದಲ ಪಟ್ಟಿ: ಬಿ ಎಸ್ ಯಡಿಯೂರಪ್ಪ
ಭೇಟಿ ಸಂಸದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಸೋಮಣ್ಣ ಪುತ್ರ ಡಾ.ಅರುಣ್ ಕೂಡ ಹಾಜರಿದ್ದು ನಾಯಕರ ನಡುವೆ ಸಂಧಾನ ನಡೆಸಿದ್ದು ಇದರ ಪ್ರತಿಫಲ ಭವಿಷ್ಯದ ದಿನಗಳಲ್ಲಿ ತಿಳಿದುಬರಲಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ ಇಳಿಯಬೇಕಿತ್ತು. ಆದರೆ, ಅವರನ್ನು ಶಿಕಾರಿಪುರದಿಂದಲೇ ಕಣಕ್ಕೆ ಇಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು. ಹಾಗಾಗಿ, ಸೋಮಣ್ಣ ಅವರಿಗೆ ವರುಣ ಟಿಕೆಟ್ ನೀಡಲಾಗಿತ್ತು. ಫಲಿತಾಂಶದ ನಂತರ ವಿಜಯೇಂದ್ರ ವಿರುದ್ಧ ಸೋಮಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಬಹಳ ವರ್ಷಗಳ ನಂತರ ಮಾಜಿ ಸಚಿವ ವಿ.ಸೋಮಣ್ಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಹಳೆಯದನ್ನೆಲ್ಲ ಮರೆತು ಸಹಕಾರ ನೀಡುವಂತೆ ಯಡಿಯೂರಪ್ಪಗೆ ಸೋಮಣ್ಣ ಮನವಿ ಮಾಡಿದ್ದಾರೆ ಎನ್ನಲಾಗಿದೆ.