ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಬೆಂಬಲಕ್ಕೆ ಕರೆ

ದಾವಣಗೆರೆ:

       ಲೋಕಸಭಾ ಚುನಾವಣೆಯಲ್ಲಿ ಶೇ.50 ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗಗಳನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲದ ಬಿಜೆಪಿಯ ವಿರುದ್ಧ ಮತ ಚಲಾಯಿಸಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಕರೆ ನೀಡಿದರು.

         ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಪ್ರದೇಶ ಕುರುಬ ಸಂಘ ರಾಜ್ಯದ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ದಾವಣಗೆರೆ, ಮಂಗಳೂರು, ಉಡುಪಿ-ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ ಸೇರಿ 7 ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ಜಾತಿಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.

         ಚನ್ನಯ್ಯ ಒಡೆಯರ್ ಅವರ ನಂತರದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳ ಬಳಿಕ ಕುರುಬ ಸಮಾಜಕ್ಕೆ ಟಿಕೆಟ್ ಸಿಕ್ಕಿರುವುದು ಸಂತಸ ತಂದಿದೆ. ಬಿಜೆಪಿ 28 ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ಯಾರೊಬ್ಬರಿಗೂ ಟಿಕೆಟ್ ನೀಡದೇ ಸಮುದಾಯ ಕಡೆಗಣಿಸಿದೆ. ಆದರೆ, ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡದಿದ್ದರೂ 7 ಕ್ಷೇತ್ರಗಳಲ್ಲಿ ಅವಕಾಶ ನೀಡಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಿಂದುಳಿದ ಸಮಾಜದವರು ಸಂಸತ್ ಪ್ರವೇಶಿಸುವಂತೆ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

       ಪಟ್ಟಣ ಪಂಚಾಯತ್ ಸದಸ್ಯ, ಅಧ್ಯಕ್ಷರಾಗಿ, ತಾ.ಪಂ. ಸದಸ್ಯರಾಗಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ಎಚ್.ಬಿ.ಮಂಜಪ್ಪ ಅವರು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ಆದರೆ, ಕಾಂಗ್ರೆಸ್ ತಡವಾಗಿಯಾದರೂ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿದೆ ಎಂದರು.

        ಮೈತ್ರಿ ಅಭ್ಯರ್ಥಿ ಮಂಜಪ್ಪನವರ ಪರವಾಗಿ ಪ್ರತಿ ಗ್ರಾಮಗಳಲ್ಲಿಯೂ ಎಲ್ಲಾ ಸಮಾಜದವರು ಬೆಂಬಲ ಸೂಚಿಸುವುದಲ್ಲದೇ, ಮಂಜಪ್ಪನವರ ಗೆಲುವಿಗಾಗಿ ಟೊಂಕ ಕಟ್ಟಿನಿಂತಿದ್ದಾರೆ. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಆದರೆ, ಸ್ಪರ್ಧಿಸುವುದು ಮುಖ್ಯ. ಇದೊಂದು ಸುವರ್ಣ ಅವಕಾಶವಾಗಿದ್ದು ಹಿಂದುಳಿದ ವರ್ಗದ ಜನತೆ ಮೈತ್ರಿ ಅಭ್ಯರ್ಥಿಗೆ ಗೆಲುವು ತಂದುಕೊಡಬೇಕೆಂದು ಮನವಿ ಮಾಡಿದರು.

      ಹಿಂದಿನ ಚುನಾವಣೆಯಲ್ಲಿ ಬದಲಾವಣೆಗಾಗಿ ಬಿಜೆಪಿಗೆ ಅಧಿಕಾರ ನೀಡಿದ್ದೇವು. ಆದರೆ, ಜನರಿಗೆ ನೀಡಿದ ಆಶ್ವಾಸನೆಯನ್ನು ಬಿಜೆಪಿ ಪೂರೈಸಲಿಲ್ಲ, ಜಿಎಸ್‍ಟಿ, ನೋಟ್ ಬ್ಯಾನ್ ಮೂಲಕ ಜನರಿಗೆ ಹೊರೆ ಮಾಡಿದ್ದೇ ಬಿಜೆಪಿಯ ಸಾಧನೆಯಾಗಿದೆ ಎಂದು ಆರೋಪಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಜಿ.ಕೆ.ಸತ್ಯ ಮಾತನಾಡಿ, ಸರ್ವರಿಗೂ ಸಮಾನ ಅವಕಾಶಗಳು ದೊರೆಯಬೇಕೆಂಬ ಉದ್ದೇಶಕ್ಕಾಗಿ ನಮ್ಮ ಹೋರಾಟ. ಯಾವುದೇ ಪಕ್ಷದ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ, ಮೈತ್ರಿ ಆಡಳಿತದಲ್ಲಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಜರೂರು ಇದೆ ಎಂದರು.

        ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಯಮುನಪ್ಪ ಸಣ್ಣಕ್ಕಿ, ಕುರುಬ ಸಮಾಜದ ಮುಖಂಡ ಕೆಂಗೋ ಹನುಮಂತಪ್ಪ, ಪಿ.ರಾಜಕುಮಾರ್, ಬದರಿನಾಥ್, ಬೆಂಡಿಗೆರೆ ವೆಂಕಟ್‍ರಾವ್, ಎ.ರೇವಣ್ಣ, ಹೆಚ್.ಬಿ.ಪರಶುರಾಮಪ್ಪ, ಎಸ್.ಎಸ್.ಗಿರೀಶ್, ಉಪ್ಪಾರ ಸಮಾಜದ ಮುಖಂಡ ನಲ್ಕುಂದ ಹಾಲೇಶ್, ಸೋಮನಾಥ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link