ಹಿರಿಯರಿಗೆ ದಕ್ಕದ ಗೌರವ-ಮಾನ್ಯತೆ

ದಾವಣಗೆರೆ :

      ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳಲ್ಲಿ ಹಿರಿಯರಿಗೆ ಗೌರವ, ಮಾನ್ಯತೆ ದೊರೆಯುತ್ತಿಲ್ಲ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಕಳವಳ ವ್ಯಕ್ತಪಡಿಸಿದರು.

      ನಗರದ ಬಾಲನ್ಯಾಯ ಮಂಡಳಿಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆದರ್ಶ ಸಮಾಜ ಕಾರ್ಯ ಸಂಸ್ಥೆ ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಕಾನೂನು ಅರಿವು ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.

        ಪ್ರಸ್ತುತ ಬಹುತೇಕ ಮನೆಗಳಲ್ಲಿ ಹಿರಿಯರ ಬಗ್ಗೆ ತಾತ್ಸಾರ ಮನೋಭಾವ ಹೆಚ್ಚುತ್ತಿದೆ. ಹೀಗೆ ಮಾಡುವುದರಿಂದ ಹಿರಿಯರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಹಿರಿಯರು ನಮ್ಮ ಸಮಾಜದ ಮೂಲ ಬೇರು ಆಗಿದ್ದಾರೆ. ಆ ಬೇರಿಗೆ ಉತ್ತಮ ಪೋಷಕಾಂಶ ನೀಡಿ ಸಲಹಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

        ಹಿರಿಯರಿಗೂ ಕೂಡ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳಿವೆ. ಹಿರಿಯರ ನಡತೆ ಕುಟುಂಬಕ್ಕೆ ಊರು ಗೋಲಂತಿರಬೇಕು. ಅವರ ಅನುಭವಪೂರಿತ ನಡೆ-ನುಡಿ ಕುಟುಂಬಕ್ಕೆ ದಾರಿದೀಪದಂತಿರಬೇಕು. ಹಾಗೂ ಅವರು ತಮ್ಮ ಸಮಸ್ಯೆಗಳ ಕುರಿತು ಸಮಾನ ಮನಸ್ಕರೊಂದಿಗೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಇರಲು ಭಜನೆ, ಸತ್ಸಂಗ ಅಥವಾ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು.

        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಮಾತನಾಡಿ, ಹಿರಿಯ ನಾಗರಿಕರಿಗೆ ಉಚಿತ ಡಯಾಲಿಸಿಸ್ ವ್ಯವಸ್ಥೆ ಇದೆ, ಕ್ಷಯ ನಿಯಂತ್ರಣ, ಬಿಪಿ, ಶುಗರ್‍ನಂತಹ ಒಬ್ಬರಿಂದ ಒಬ್ಬರಿಗೆ ಹರಡದ ಕಾಯಿಲೆಗಳಿಗೆ ಉಚಿತ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ.

        ಇತ್ತೀಚೆಗೆ ಹಿರಿಯರಲ್ಲಿ ಹೆಚ್ಚುತ್ತಿರುವ ಪಾಶ್ರ್ವವಾಯು ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲು ಮುಂದಿನ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ ದಾವಣಗೆರೆ ಒನ್‍ನಲ್ಲಿ ವಿತರಿಸಲಾಗುತ್ತಿದ್ದು ಈ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರೂ. 5 ಲಕ್ಷದವರೆಗೆ ಹಾಗೂ ಎಪಿಎಲ್ ಕಾರ್ಡ್‍ದಾರರಿಗೆ ರೂ.1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

       ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎನ್.ಟಿ.ಮಂಜುನಾಥ್ ಮಾತನಾಡಿ, ಪಾಲನೆ, ಪೋಷಣೆ ಸಂರಕ್ಷಣೆ ಕಾಯ್ದೆಯು 2007 ರಲ್ಲಿ ಜಾರಿಗೆ ಬಂದಿದ್ದು 2009 ರಲ್ಲಿ ಈ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾದ ಪ್ರಕಾರ ಹಿರಿಯರು ತಮ್ಮ ಜೀವನಾಂಶ, ಆಸ್ತಿ ವಿಲೇವಾರಿ, ಸಂರಕ್ಷಣೆಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಮಟ್ಟದಲ್ಲಿ ರಚನೆಯಾದ ಸಮಿತಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು.
ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ದೇವರಾಜ್ ಮಾತನಾಡಿ, ಕಂದಾಯ ಇಲಾಖೆ ವತಿಯಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಬಿಪಿಎಲ್ ಹೊಂದಿರುವ ಹಿರಿಯ ನಾಗರಿಕರಿಗೆ ಅಕ್ಟೋಬರ್ ಮಾಹೆಯಿಂದ ರೂ.1000 ಮಾಸಾಶನ ನೀಡಲಾಗುತ್ತಿದೆ.

        ಇಂದಿರಾಗಾಂಧಿ ವೃದ್ಧಾಪ್ಯ ವೇತನದಡಿ 65 ರಿಂದ 80 ವರ್ಷದೊಳಗಿನವರಿಗೆ ರೂ. 600 ಮಾಸಾಶನ, ನಿರ್ಗತಿಕ ವಿಧವೆಯರಿಗೆ ರೂ. 600, ಶೇ. 45 ರಿಂದ 75 ವಿಕಲಚೇತನರಿಗೆ ರೂ. 600 ಮಾಸಾಶನ, ಶೇ. 75 ಕ್ಕೂ ಮೇಲ್ಪಟ್ಟ ಅಂಗವೈಕಲ್ಯತೆಗೆ ರೂ.1400 ಮಾಸಾಶನ ನೀಡಲಾಗುವುದು. ಮನಸ್ವಿನಿ ಯೋಜನೆಯಡಿ ವಿಚ್ಚೇದಿತ ಹಾಗೂ ಅವಿವಾಹಿತರಿಗೆ ರೂ. 600, ಮೈತ್ರಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ರೂ.600 ಮಾಸಾಶನ ನೀಡಲಾಗುವುದು. ಫಲಾನುಭವಿಗಳು ಬಿಪಿಎಲ್ ಕಾರ್ಡ್, ಆಧಾರ್ ಪ್ರತಿ, ಬ್ಯಾಂಕ್ ವಿವರ, ಭಾವಚಿತ್ರ ಸೇರಿದಂತೆ ಇತರೆ ನಿಗದಿತ ದಾಖಲಾತಿಗಳನ್ನು ಒದಗಿಸಿ ಅರ್ಜಿ ಹಾಕಿ ಸೌಲಭ್ಯ ಪಡೆಯಬಹುದೆಂದು ಮಾಹಿತಿ ನೀಡಿದರು.

         ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರದ ಕೆ.ಹೆಚ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎಲ್.ಹೆಚ್.ಅರುಣ್‍ಕುಮಾರ್, ಆದರ್ಶ ಸಮಾಜ ಕಾರ್ಯ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಮಂಜಪ್ಪ ಉಪಸ್ಥಿತರಿದದ್ದರು. ವಿಕಲಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆಯ ಅಧಿಕಾರಿ ಶಶಿಧರ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ 50 ಹಿರಿಯ ನಾಗರೀಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link