ಹಿರಿಯೂರು :
ಈ ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲೇ ಓದಿಸುವ ಪಣ ತೊಡುವ ಮೂಲಕ ರಾಜ್ಯದಲ್ಲಿ ಕನ್ನಡವನ್ನು, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂಬುದಾಗಿ ಬಳ್ಳಾರಿಯ ಖ್ಯಾತ ನ್ಯಾಯವಾದಿಗಳಾದ ರೇವಣ್ಣಬಳ್ಳಾರಿ ಹೇಳಿದರು.
ನಗರದ ವೇದಾವತಿ ಬಡಾವಣೆಯಲ್ಲಿರುವ ಹಿರಿಯ ನಾಗರೀಕರ ಯೋಗಕ್ಷೇಮ ಕೇಂದ್ರದಲ್ಲಿ, ಚಿನ್ಮೊಲಾದ್ರಿ ಸಾಹಿತ್ಯ ವೇದಿಕೆ, ಶ್ರೀ ಸಿದ್ದೇಶ್ವರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ವಿಶ್ವ ಕಲ್ಯಾಣ ಗ್ರಾಹಕರ ಪರಿಸರ ಸಾಂಸ್ಕತಿಕ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಕವಿಗೋಷ್ಟಿ ಹಾಗೂ ಹಿರಿಯ ನಾಗರೀಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿನ್ಮೊಲಾದ್ರಿ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ದಯಾಪುತ್ತೂರ್ಕರ್ ರವರು ಮಾತನಾಡಿ ಹಿರಿಯ ನಾಗರೀಕರಿಗೆ ಸನ್ಮಾನ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಚಾರ ಎಂದರು ಹಾಗೂ ನಮ್ಮ ಸಾಹಿತ್ಯ ಸಂಸ್ಕತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಕವಿಗಳು ರಚಿಸುವ ಕವಿತೆಗಳು ಜನರ ಮನ ಮುಟ್ಟುವಂತೆ ಇರುತ್ತವೆ ಹಾಗೂ ಈ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ವೀರಣ್ಣನವರು ಮಾತನಾಡಿ ಎಲ್ಲಾ ಧರ್ಮಗಳೂ ಸಹ ಮಾನವ ಧರ್ಮವನ್ನು ಪ್ರತಿಪಾದಿಸುತ್ತವೆ . ಮನುಷ್ಯ ಮನುಷ್ಯರ ನಡುವೆ ಪರಸ್ಪರ ಪ್ರೀತಿ ಇರಬೇಕು ಆದರೆ ಸ್ವಾರ್ಥ ಇರಬಾರದು ಎಂದು ಹೇಳಿದರು.
ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ ರಂಗಸ್ವಾಮಿ ಸಕ್ಕರ ಮಾತನಾಡಿ ಇಂದು ಮಾನವೀಯತೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರಲ್ಲದೆ ಅಲ್ಲದೇ ಸಮಾಜವನ್ನು ಹಾಗೂ ಸರ್ಕಾರವನ್ನೂ ಜಾಗೃತಗೊಳಿಸುವಂತಹ ಶಕ್ತಿ ಕವಿಗಳು ರಚಿಸುವ ಬರಹಗಳಿಗೆ ಇದೆ ಎಂದರು.
ಆಧ್ಯಾತ್ಮಿಕ ಚಿಂತಕರಾದ ಎ.ಕಂಬಯ್ಯ ಹಾಗೂ ಕನ್ನಡ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಕೂಡ್ಲಹಳ್ಳಿ ಜಗದೀಶ್ ವಾಲ್ಮೀಕಿ ವರ್ತಮಾನ ವಿಚಾರವಾಗಿ ಉಪನ್ಯಾಸ ನೀಡಿದರು. ಚಿನ್ಮೊಲಾದ್ರಿ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಬಿ.ಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಚೇತನ್ ಮತ್ತಿತರರು ಮಾತನಾಡಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಬಬ್ಬೂರುತಿಪ್ಪೀರನಾಯಕ, ಕಿರಣ್ಮಿರಜ್ಕರ್, ಮುನಾವರ್, ನಾಗೇಂದ್ರಪ್ಪ, ಹರ್ತಿಕೋಟೆ ಮಹಾಸ್ವಾಮಿ , ಕಂದೀಕೆರೆಗಿರಿಸ್ವಾಮಿ, ಜಯ್ಯಣ್ಣ, ಮಾರೇನಹಳ್ಳಿ ತಿಪ್ಪೇಸ್ವಾಮಿ, ಪ್ರಹ್ಲಾದ್. ತಿಮ್ಮಯ್ಯ, ಟಿ.ವಿ.ನಾಗರಾಜ್, ಶಿವಣ್ಣ, ಮಹಮ್ಮದ್ರಫೀ, ಜಯಪ್ರಕಾಶ್ ಸೇರಿದಂತೆ ಅನೇಕ ಕವಿಗಳು ತಮ್ಮ ಸ್ವರಚಿತ ಕವನಗಳ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರೀಕರಾದ ಟಿ.ಶಿವಪ್ರಸಾದ್, ವಿ.ಮನ್ಮಥ್, ಜೈನಾಬಿ, ಎಂ.ವಿ.ನಾಗರತ್ನಮ್ಮ, ಜಗನ್ನಾಥ್ ಜೋಷಿ, ಈರಣ್ಣ, ಸಾವಿತ್ರಮ್ಮ, ಕರಿಯಮ್ಮ, ಗೋವಿಂದರೆಡ್ಡಿ, ಹನುಮಂತಪ್ಪ, ಜಿ.ನಾಗರತ್ನಮ್ಮ, ಗಂಗಮ್ಮನವರಿಗೆ ಸನ್ಮಾನಿಸಲಾಯಿತು.