ಹೊಳೆ ಮುತ್ಕೂರು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ:

      ತಾಲೂಕಿನ ಹೊಳೆ ಮುತ್ಕೂರು ಗ್ರಾ.ಪಂ.ಕೇಂದ್ರ ಸ್ಥಾನವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿರುವುದನ್ನು ವಿರೋಧಿಸಿ, ಗ್ರಾಮದ ಮುಖಂಡರೊಂದಿಗೆ ಸಾರ್ವಜನಿಕರು ಸೇರಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತಗಟ್ಟೆಯಿಂದ ದೂರ ಉಳಿದು, ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಹಾಕಿದ ಘಟನೆ ಜರುಗಿತು.

       ಗ್ರಾ.ಪಂ.ಕಚೇರಿ ಗ್ರಾಮದಿಂದ ಬೇರೆಡೆ ಸ್ಥಳಕ್ಕೆ ವರ್ಗಗೊಳ್ಳುವ ಆದೇಶದ ಹಿನ್ನೆಲೆಯಲ್ಲಿ, ಈ ಮೊದಲೇ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ, ಅವರ ದಿವ್ಯ ನಿರ್ಲಕ್ಷ್ಯದಿಂದ ಕಚೇರಿ ಸ್ಥಳಾಂತರಕ್ಕೆ ಕಾರಣವಾಗಿ ಗ್ರಾಮಗ್ರಾಮಗಳ ನಡುವೆ ಕಲುಷಿತ ವಾತವರಣ ಸೃಷ್ಠಿಮಾಡುತ್ತಿದ್ದಾರೆ ಎಂದು ಆರೋಪಮಾಡಿದ ಗ್ರಾಮಸ್ಥರು, ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು.

       ಗ್ರಾಮದ ಹಿರಿಯರಾದ ಪರ್ವತಪ್ಪ ಸಾಮೂಹಿಕ ಮತದಾನ ಬಹಿಷ್ಕಾರರನ್ನುದ್ದೇಶಿಸಿ ಮಾತನಾಡಿ, ಪ್ರತಿಯೊಂದು ಹಂತದಲ್ಲಿ ಅಧಿಕಾರಿಗಳು ನಮ್ಮ ಗ್ರಾಮವನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಸದಸ್ಯರ ಸಂಖ್ಯೆ ಇರದೆ ಇದರಲ್ಲಿಯೂ ತಾರಮ್ಯ ನಡೆದಿದೆ.

        ಗ್ರಾ.ಪಂ.ವ್ಯಾಪ್ತಿಯ ಕಿತ್ನೂರು ಗ್ರಾಮದಲ್ಲಿ ಕಡಿಮೆ 1727 ಮತ ಸಂಖ್ಯೆ ಹೊಂದಿದ್ದರೂ 6 ಜನ ಸದಸ್ಯರನ್ನು ನೀಡಿದ್ದಾರೆ, ಆದರೆ ನಮ್ಮ ಗ್ರಾಮಕ್ಕೆ ಮತ ಸಂಖ್ಯೆಯೇ 1400 ಹೆಚ್ಚಿದ್ದು ಕೇವಲ 4 ಜನ ಸದಸ್ಯರನ್ನು ನೀಡಲಾಗಿದೆ ಎಂದು ಆರೋಪಿಸಿದರು. ನಮ್ಮ ಸಮಸ್ಯೆ ಬಗೆ ಹರಿಯುವರೆಗೂ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರ ಮಟ್ಟದಲ್ಲಿ ನಡೆಯುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಖಾರವಾಗಿಯೇ ತಿಳಿಸಿದರು.

        ಗ್ರಾಮದ ಮುಖಂಡ ಹುಲಿ ಅನಂತ ಮಾತನಾಡಿ 2-3 ದಶಕಗಳ ಕಾಲ ನಮ್ಮ ಗ್ರಾಮದಲ್ಲಿ ಗ್ರಾ.ಪಂ.ಕೇಂದ್ರ ಇದೆ. ಈಗ ಕಿತ್ನೂರು ಗ್ರಾಮದವರ ಓಲೈಕೆಗೆ ನಮ್ಮ ಗ್ರಾಮದಲ್ಲಿರುವ ಪಂಚಾಯಿತಿ ಕಚೇರಿಯನ್ನು ಅವರ ಅನುಕೂಲಕ್ಕೆ ತಕ್ಕಂತೆ ಬೇರೆಡೆ ಸ್ಥಳಾಂತರಕ್ಕೆ ಆದೇಶ ನೀಡಿದ್ದಾರೆ. ಈ ಕ್ರಮದಿಂದಾಗಿ ನಮ್ಮ ಗ್ರಾಮದ ಎಲ್ಲ ಸಮುದಾಯಗಳ ಜನರು ಒಗ್ಗಟ್ಟಾಗಿ ಸಭೆ ನಡೆಸಿ, ಇದರ ಬಗ್ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದೇವೆ ಹಾಗೂ ಸರ್ಕಾರದ ಗಮನ ಸೆಳೆಯಲು ಚುನಾವಣಾ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

        ಗ್ರಾಮಕ್ಕೆ ಅಧಿಕಾರಿಗಳ ಬೇಟಿ:- ಬಹಿಷ್ಕಾರದ ವಿಷಯ ತಿಳಿಯುತ್ತಿದ್ದಂತೆ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥ ಬಿ.ಮಲ್ಲಾನಾಯ್ಕ ಮತ್ತು ತಹಸಿಲ್ದಾರ್ ಸಂತೋಷ್‍ಕುಮಾರ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಬಹಿಷ್ಕಾರದ ನಿರ್ಧಾರ ಬದಲಿಸುವಂತೆ ಮನವೊಲಿಸಲು ಯತ್ನಿಸಿ ನಿಮ್ಮ ಮತ, ನಿಮ್ಮ ಹಕ್ಕು, ಪ್ರಜಾತಂತ್ರ ವ್ಯವಸ್ಥೆಯನ್ನು ಮತದಾರರು ಬಲಪಡಿಸಬೇಕಾದ ಕರ್ತವ್ಯ ಹೊಂದಿದ್ದಾರೆ. ಈ ಬಾರಿ ವೋಟ್ ಮಾಡಿ ನಿಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ವಿನಂತಿಸಿಕೊಂಡರು.

      ಆದರೆ, ಗ್ರಾಮಸ್ಥರು ನಮ್ಮ ನಿರ್ಧಾರ ಬದಲಿಸಲ್ಲ ಎಂದು ಪಟ್ಟು ಹಿಡಿದರು. ಅನಿವಾರ್ಯವಾಗಿ ಬಂದದಾರಿಗೆ ಅಧಿಕಾರಿಗಳು ಮರಳಿದರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೂತ್ ಸಂಖ್ಯೆ 9 ಮತ್ತು 10 ರಲ್ಲಿ ಸರ್ಕಾರಿ ಸಿಬ್ಬಂದಿಯ 9 ಅಂಚೆ ಮತ ಪತ್ರಗಳು ಮಾತ್ರ ಹಾಕಿದ್ದಾರೆ.

       ಸೆಕ್ಟರೆಲ್ ಅಧಿಕಾರಿ ರವಿನಾಯ್ಕ್, ಕಂದಾಯ ನಿರೀಕ್ಷಕ ವೆಂಕರೆಡ್ಡಿ, ಗ್ರಾಮಸ್ಥರಾದ ತಳವಾರ ಲಕ್ಷಣ, ಮಹೇಂದರ ರೆಡ್ಡಿ, ಎನ್.ಮಾರುತೇಶ್, ಪಾಂಡುರಂಗಪ್ಪ, ಎಂ.ಪ್ರಕಾಶ್‍ರೆಡ್ಡಿ, ಬಿ.ನಾಮದೇಪ್ಪ, ಎಚ್.ಕೊಟ್ರಯ್ಯ, ಅರ್.ಎಸ್.ವೆಂಕಾರೆಡ್ಡಿ, ಉಮೇಶ್, ಕೆ.ಎಂ.ರವಿ, ಮಂಜುರೆಡ್ಡಿ, ಎಚ್.ಎಂ.ವಿರುಪಾಕ್ಷಯ್ಯ, ಪರಮೇಶ್ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link