ಚಳ್ಳಕೆರೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರೂ ಸೇರಿದಂತೆ ಹಲವಾರು ಸೌಲಭ್ಯಗಳ ಹಾಗೂ ಯೋಜನೆಗಳ ಜಾರಿ ಕುರಿತು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ದಿಢೀರ್ ಪರಿಶೀಲನಾ ಸಭೆಯನ್ನು ನಡೆಸಿ ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸಿದರು.
ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾದ ಟಿ.ರಘುಮೂರ್ತಿ ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಬಾರಿ ಅಧಿಕಾರಿಗಳ ಸಭೆಯನ್ನು ನಡೆಸಿ ಕ್ಷೇತ್ರದಲ್ಲಿ ಅಧಿಕಾರಿಗಳು ಕೈಗೊಂಡಿರುವ ಹಲವಾರು ಕ್ರಮಗಳ ಬಗ್ಗೆ ಸುಧೀರ್ಘ ಪರಿಶೀಲನೆ ನಡೆಸಿದರು. ಇದೇ ಮೊದಲ ಬಾರಿಗೆ ಶಾಸಕ ಟಿ.ರಘುಮೂರ್ತಿ ತಾಲ್ಲೂಕು ಮಟ್ಟದ ಹಲವಾರು ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ವಿಫಲರಾದಲ್ಲಿ ಸರ್ಕಾರದ ಯೋಜನೆಗಳು ಜಾರಿ ಮಾಡಲು ನಿರ್ಲಕ್ಷ್ಯೆ ವಹಿಸಿದಲ್ಲಿ ಅಮಾನತ್ತುಗೊಳಿಸುವ ಎಚ್ಚರಿಕೆಯನ್ನು ಸಭೆಯಲ್ಲಿ ಹಲವಾರು ಬಾರಿ ನೀಡಿದರು. ಕ್ಷೇತ್ರ ವ್ಯಾಪ್ತಿಯ ಸುಮಾರು 25 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಕಂದಾಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಾರಂಭದ ಹಂತದಲ್ಲಿ ಕುಡಿಯುವ ನೀರಿನ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ಇದೇ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಶುದ್ದ ಕುಡಿಯುವ ನೀರು ಘಟಕದ ಕಾರ್ಯನಿರ್ವಹಣೆಯಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿದ್ದು, ಇವುಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಲವಾರು ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಮೀನಾಮೇಷ ಏಣಿಸುತ್ತಿದ್ದನ್ನು ಕಂಡ ಶಾಸಕರು ಅನಗತ್ಯ ಸುಳ್ಳು ಮಾಹಿತಿ ನೀಡಿ ಕ್ಷೇತ್ರದ ಪ್ರಗತಿಗೆ ಅಡ್ಡಿಯಾಗದೀರಿ. ಪ್ರಾಮಾಣಿಕವಾಗಿ ಸರ್ಕಾರದ ಕೆಲಸ ಮಾಡಿ, ಈಗಾಗಲೇ ಸರ್ಕಾರಿ ಈ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಉದ್ಯೋಗ ಖಾತರಿ ಯೋಜನೆಯೂ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಕ್ಷೇತ್ರದ ಬರ ಜನರಿಗೆ ತಾಲ್ಲೂಕು ಆಡಳಿತ ಸ್ಪಂದಿಸಬೇಕಿದೆ. ಇದು ಪ್ರತಿಯೊಬ್ಬ ಅಧಿಕಾರಿಯ ನೈತಿಕ ಜವಾಬ್ದಾರಿಯೂ ಹೌದು.
ಪ್ರಸ್ತುತ ಇನ್ನೂ 15 ದಿನಗಳೊಳಗೆ ಮತ್ತೊಂದು ಸಭೆ ಕರೆದು ಈಗ ನೀಡಿರುವ ಎಲ್ಲಾ ಮಾಹಿತಿಯನ್ನು ಅಧಿಕಾರಿ ವರ್ಗ ಅಂದಿನ ಸಭೆಯೊಳಗೆ ಭರವಸೆ ನೀಡಿದಂತೆ ಪೂರೈಸಬೇಕು. ಜನತೆಯ ಸಂಕಷ್ಟಗಳ ಬಗ್ಗೆ ಅಧಿಕಾರಿಗಳೇ ಸ್ಪಂದಿಸದಿದ್ದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.
ನಗರದ ಹಲವಾರು ಬಡಾವಣೆಗಳಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟದಲ್ಲಿದ್ದು, ಅಂತವುಗಳ ಪಟ್ಟಿ ಮಾಡಿ ಅಗತ್ಯವಿದ್ದಲ್ಲಿ ಮಿನಿ ವಿಧಾನ ಸೌಧ ಕಚೇರಿಗೆ ಕಚೇರಿಗಳನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡಬೇಕು. ಅಂಗನವಾಡಿ, ಅಗ್ನಿಶಾಮಕ ಠಾಣೆ, ಕಾರ್ಮಿಕ ಇಲಾಖೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳಿಗೆ ನಗರಸಭೆ ಆಡಳಿತ ಸೂಕ್ತ ಜಾಗವನ್ನು ನೀಡುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ ಸರ್ಕಾರಿ ಗೋಮಾಳದ ಬಗ್ಗೆ ಮಾಹಿತಿ ನೀಡುವಂತೆ ತಹಶೀಲ್ದಾರ್ರವರಿಗೆ ಸೂಚಿಸಿದರು.
ನಗರದ 31 ವಾರ್ಡ್ಗಳಲ್ಲಿ 15 ವಾರ್ಡ್ಗಳಲ್ಲಿ ಉದ್ಯಾನವನ ನಿರ್ಮಿಸಿರುವ ಬಗ್ಗೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾಹಿತಿ ನೀಡಿದ್ದು, ಉಳಿದ 16 ವಾರ್ಡ್ಗಳಲ್ಲಿ ನಗರಸಭಾ ವತಿಯಿಂದ ಉದ್ಯಾನವನಗಳನ್ನು ನಿರ್ಮಿಸುವಂತೆ ಸೂಚಿಸಿದರು. ನಗರ ವ್ಯಾಪ್ತಿಯಲ್ಲಿ ಈಗಾಗಲೇ ನಗರೋತ್ಥಾನ ಯೋಜನೆಯಡಿ 25 ಕೋಟಿ ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟದ, ಖಾಸಗಿ ಬಸ್ ನಿಲ್ದಾಣ ಹಾಗೂ 15ಕ್ಕೂಹೆಚ್ಚು ರಸ್ತೆಗಳ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪೌರಾಯುಕ್ತರು ತಿಳಿಸಿದ್ದು, ರಸ್ತೆಗಳ ಡಾಂಬರೀಕರಣ ಕಾಮಗಾರಿ ಕಳಪೆಯಾಗದಂತೆ ನಿಗಾ ವಹಿಸುವಂತೆ ಸಹಾಯಕ ಇಂಜಿನಿಯರ್ ಲೋಕೇಶ್ಗೆ ಶಾಸಕರು ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ನಿಗಮ ವತಿಯಿಂದ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 3680 ಮನೆಗಳು ಮಂಜೂರಾಗಿದ್ದು, ಆ ಪೈಕಿ ವಿವಿಧ ಗ್ರಾಮ ಪಂಚಾಯಿತಿ ವತಿಯಿಂದ ಕೇವಲ ಸಾವಿರ ಮನೆಗಳು ಮಾತ್ರ ಜಿಪಿಎಸ್ ಆಗಿದೆ ಎಂದು ಮಾಹಿತಿ ತಿಳಿದ ಶಾಸಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯೆ ತನಕ್ಕೆ ಬೇಸರ ವ್ಯಕ್ತ ಪಡಿಸಿದರು. ಕಳೆದ ಆರು ತಿಂಗಳಿನಿಂದ ಸಮಯ ನೀಡಿದರೂ ವಸತಿ ಹೀನರನ್ನು ಪತ್ತೆ ಮಾಡಿ ದಾಖಲಾತಿಗಳ ಸಹಿತ ಜಿಪಿಎಸ್ ಮಾಡಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಈ ರೀತಿ ಕಾರ್ಯನಿರ್ವಹಿಸಿದರೆ ಜನರಿಗೆ ಉತ್ತರ ಕೊಡುವುಕಷ್ಟವಾಗುತ್ತದೆ. ಅ.25ರೊಳಗೆ ಉಳಿದ ಎಲ್ಲಾ ಮನೆಗಳನ್ನು ಜಿಪಿಎಸ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾಲುಮರದ ತಿಮ್ಮಕ್ಕ ಉದ್ಯಾನವನ ಮುಂಭಾಗದಲ್ಲಿ ವಾಹನಗಳ ಪಾರ್ಕಿಂಗ್ ಹಾಗೂ ಸಾರ್ವಜನಿಕರು ಕುಳಿತುಕೊಳ್ಳಲು ಸಿಮೆಂಟ್ ಬೆಂಚ್ ನಿರ್ಮಿಸುವಂತೆ ಅರಣ್ಯ ಇಲಾಖೆ ಅಧಿಕಾರಿ ಎಸ್.ಸುರೇಶ್ಗೆ ಸೂಚನೆ ನೀಡಿದರು. ನಗರ ವ್ಯಾಪ್ತಿಯಲ್ಲಿ ರಾಜಕಾಲುವೆ ಯಾವ ಯಾವ ಭಾವದಲ್ಲಿ ಇತ್ತು ಎಂಬ ಬಗ್ಗೆ ನಕಾಶೆ ಸಹಿತ ಮುಂದಿನ ದಿನಗಳಲ್ಲಿ ವರದಿ ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶ್ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ 4500 ಸೈಕಲ್ ಬಂದಿದ್ದು, ಈ ತಿಂಗಳ ಅಂತ್ಯದಲ್ಲಿ ವಿತರಣೆ ಮಾಡಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಮಾಹಿತಿ ನೀಡಿ, ಬೆಳೆ ನಷ್ಟ ಪರಿಹಾರ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ತೋಟಗಾರಿಕೆ, ರೇಷ್ಮ ಇಲಾಖೆ, ಪಶು ಸಂಗೋಪನೆ ಇಲಾಖೆಯ ಡಾ.ಹನುಮಪ್ಪ ಮಾಹಿತಿ ನೀಡಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾರಾಮಣ್ಣ ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈಶ್ವರಪ್ರಸಾದ್ ಎಲ್ಲರನ್ನೂ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ