ತುರುವೇಕೆರೆ
ತಾಲ್ಲೂಕಿನ ದಂಡಿನಶಿವರದ ಗ್ರಾಮ ದೇವತೆ ಹೊನ್ನಾದೇವಿ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿಗಳ ಹಣವನ್ನು ಕಳ್ಳರು ಕಳವು ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಹೊನ್ನಾದೇವಿ ದೇವಸ್ಥಾನವು ಗ್ರಾಮದ ಮಧ್ಯಭಾಗದ ರಸ್ತೆ ಪಕ್ಕದಲ್ಲಿದೆ. ನಿನ್ನೆ ತಡ ರಾತ್ರಿ ಕಳ್ಳರು ಹೊರಗಿನಿಂದ ದೇವಾಲಯಕ್ಕೆ ಪ್ರವೇಶವಿರುವ ಕಬ್ಬಿಣ ಮತ್ತು ಮರದ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ. ದೇವಾಲಯದ ಹೊನ್ನಾದೇವಿ ವಿಗ್ರಹದ ಎದುರು 2 ಎತ್ತರವಾದ ಹುಂಡಿಗಳಿವೆ. ಇವುಗಳಿಗೆ ಗಟ್ಟಿಬೀಗ ಹಾಕಲಾಗಿದೆ. ಕಳ್ಳರು ಹುಂಡಿಯ ಬೀಗವನ್ನು ಕಬ್ಬಿಣದ ಆಯುಧದಿಂದ ಮೀಟಿ ಹುಂಡಿಯಲ್ಲಿದ್ದ ನೋಟುಗಳನ್ನು ತೆಗೆದುಕೊಂಡು ಮಿಕ್ಕ ಚಿಲ್ಲರೆ ಹಣವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ದೇವಸ್ಥಾನದ ಪೂಜೆಗೆಂದು ಬಂದ ಭಕ್ತರು ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಅರ್ಚಕ ಡಿ.ಎನ್.ಉಮೇಶ್ ಅವರ ಗಮನಕ್ಕೆ ತಂದಿದ್ದಾರೆ. ಇವರು ನೀಡಿದ ದೂರಿನನ್ವಯ ಡಿವೈಎಸ್‍ಪಿ ಶಾಂತ್ ವೀರ್ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊನ್ನಾದೇವಿ ಜಾತ್ರೆಯ ವೇಳೆ ಹುಂಡಿಯಲ್ಲಿ ಭಕ್ತರ ಕಾಣಿಕೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳ ಹಣ ಸಂಗ್ರಹವಾಗುತ್ತದೆ. ಇನ್ನೂ ಜಾತ್ರೆ ಆಗಿಲ್ಲದ ಕಾರಣ ಒಂದು ಲಕ್ಷದ ತನಕ ಹುಂಡಿಯಲ್ಲಿ ಹಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗಂಗಾಧರ್ ಗೌಡ ತಿಳಿಸಿದರು.
ಹೊನ್ನಾದೇವಿಯು ತಾಲ್ಲೂಕಿನ ಪ್ರಸಿದ್ಧ ದೇವಾಲಯವಾಗಿದ್ದು ಹೆಚ್ಚಿನ ಹಣ ತುರುವೇಕೆರೆ ಮುಜಿರಾ ಇಲಾಖೆಗೆ ಬರುತ್ತದೆ. ಆದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಜೊತೆಗೆ ದೇವಸ್ಥಾನದ ಭದ್ರತೆಗೂ ಕ್ರಮಕೈಗೊಂಡಿಲ್ಲ . ಅಲ್ಲದೆ ಇಂತಹ ದೊಡ್ಡ ದೇವಸ್ಥಾನದಲ್ಲಿ ಒಂದೂ ಸಿಸಿಟಿ ಕ್ಯಾಮರಾವನ್ನೂ ಅಳವಡಿಸಿಲ್ಲ ಎಂದು ತಹಶೀಲ್ದಾರ್ ನಯೀಮ್ ಉನ್ನೀಸಾ ಮತ್ತು ಮುಜಿರಾ ಇಲಾಖಾ ಅಧಿಕಾರಿಗಳನ್ನು ಸಾರ್ವಜನಿಕರು ತರಾಟಗೆ ತೆಗೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ