ನವದೆಹಲಿ
ಹೊಸ ಶಿಕ್ಷಣ ನೀತಿ (ಎನ್ ಇ ಪಿ) ಕರಡಿಗೆ ಸಂಬಂಧಿಸಿದಂತೆ ಜುಲೈ 15 ರವರೆಗೆ ಸುಮಾರು 65 ಸಾವಿರ ಸಲಹೆಗಳು ದೊರೆತಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಾಲತಾಣದಲ್ಲಿ ಮತ್ತು ಇನ್ನೋವೇಟ್ ಡಾಟ್ ಮೈಗೌವ್ ಡಾಟ್ ಐಎನ್ ವೇದಿಕೆಯಲ್ಲಿ ಎನ್‌ಇಪಿ 2019 ಕರಡು ಪ್ರಕಟಿಸಲಾಗಿದ್ದು ಸಾರ್ವಜನಿಕರೂ ಸೇರಿದಂತೆ ಸಂಬಂಧಪಟ್ಟವರಿಂದ ಸಲಹೆ ಆಹ್ವಾನಿಸಲಾಗಿತ್ತು. 2019 ರ ಜುಲೈ 15 ರ ವೇಳೆಗೆ ಸುಮಾರು 65 ಸಾವಿರ ಸಲಹೆಗಳು ಸ್ವೀಕೃತಗೊಂಡಿವೆ ಎಂದು ತಿಳಿಸಿದ್ದಾರೆ.
ಡಾ.ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಎನ್‌ಇಪಿ ಸಮಿತಿ ಸಚಿವಾಲಯಕ್ಕೆ 2019ರ ಮೇ 31 ರಂದು ವರದಿ ಸಲ್ಲಿಸಿತ್ತು. ಪ್ರಾಥಮಿಕವಾಗಿ ಎನ್‌ಇಪಿ ಅನ್ನು ಮಾನವ ಸಂಪನ್ಮೂಲ ಸಚಿವಾಲಯದ ಜಾಲತಾಣದಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿತ್ತು. 2019 ರ ಜೂನ್ 30 ಸಲಹೆ ಸ್ವೀಕರಿಸಲು ಕೊನೆ ದಿನಾಂಕ ಎಂದು ನಿಗದಿಪಡಿಸಲಾಗಿತ್ತು.
ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಸಲಹೆ ನೀಡಲು ಕಾಲಾವಕಾಶ ವಿಸ್ತರಣೆ ಕೋರಿದ್ದರಿಂದ ಹಾಗೂ ವಿವಿಧ ಭಾಷೆಗಳಲ್ಲಿ ಕರಡು ಪ್ರಕಟಣೆಗೆ ಮನವಿ ಬಂದ ಹಿನ್ನೆಲೆಯಲ್ಲಿ ಅಸ್ಸಾಂ, ಬೆಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಸಂಸ್ಕೃತ, ತಮಿಳು, ತೆಲುಗು, ಉರ್ದು ಭಾಷೆಗಳಲ್ಲಿ ಕರಡಿನ ಸಾರಾಂಶದ ಅನುವಾದ ಪ್ರಕಟಿಸಲಾಗಿದೆ ಎಂದು ಸಚಿವರು ವಿವರಿಸಿದರು.
ವಿವಿಧ ವರ್ಗಗಳ ಜನರು ನೀತಿ ನಿರೂಪಣೆಯಲ್ಲಿ ಭಾಗಿಯಾಗುವಂತಾಗಲು ಸಲಹೆ ನೀಡಲು ಕೊನೆ ದಿನಾಂಕವನ್ನು 2019 ರ ಜುಲೈ 31 ರ ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.