ಹೊಸದುರ್ಗ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ಇಲ್ಲಿನ ತಾಪಂ ಇಓ ಜಾನಕಿರಾಮ್ ಹೊಲಗಳಲ್ಲಿ ನೀರು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ನೀರುಗಾಲುವೆ ನಿರ್ಮಾಣ ಮಾಡಿ ಒಟ್ಟು 2.26ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿಕೊಳ್ಳುವ ಮೂಲಕ ಹೊಸದುರ್ಗ ತಾಲೂಕು ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
ತಾಲೂಕಿನ ಸಾವಿರಾರು ಜನರು ಉದ್ಯೋಗ ಅರಸಿ ನಾನಾ ಮಹಾನಗರಗಳಿಗೆ ವಲಸೆ ಹೋಗಿದ್ದರು. ಕೊರೊನಾ ಸೊಂಕು ತಡೆಗಟ್ಟಲು ಸರಕಾರ ಲಾಕ್ ಡೌನ್ ಘೋಷಿಸಿತು. ಈ ಸಂದರ್ಭದಲ್ಲಿ ಎಲ್ಲಾ ಕೆಲಸಗಳು ಬಂದ್ ಆಗಿದ್ದವು. ಆಗ ವಿವಿಧ ಮಹಾನಗರಗಳಿಂದ ಹಳ್ಳಿಗಳಿಗೆ ವಲಸೆ ಬಂದ ಕಾರ್ಮಿಕರಿಗೆ ನರೇಗಾ ಯೋಜನೆ ಉದ್ಯೋಗ ಕಲ್ಪಿಸಿದೆ. ತಾಲೂಕಿನಲ್ಲಿ ಒಟ್ಟು 41.238 ಕೂಲಿಕಾರರು ಜಾಬ್ ಕಾರ್ಡ್ ಹೊಂದಿದ್ದಾರೆ. ವಲಸೆ ಬಂದವರಲ್ಲಿ ಜಾಬ್ ಕಾರ್ಡ್ ಇಲ್ಲದವರನ್ನು ಗುರತಿಸಿ ಹೊಸದಾಗಿ 729 ಕಾರ್ಡ್ ವಿತರಿಸಿ ನರೇಗಾದಡಿ ಕೆಲಸ ನೀಡಲಾಯಿತು. 210 ಕೃಷಿ ಹೊಂಡ, 412 ಬದು ನಿರ್ಮಾಣ, 32 ಕೆರೆ ಹೂಳೆತ್ತುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಇಓ ಜಾನಕಿರಾಂ ತಿಳಿಸಿದರು.
ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಹಾಕಿಕೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಅದರಂತೆ ಕಾಮಗಾರಿ ಕೂಡ ಚುರುಕಾಗಿ ನಡೆಯುತ್ತಿವೆ. ಏಪ್ರಿಲ್ ನಿಂದ ಇಲ್ಲಿಯವರೆಗೂ 931 ವಿವಿಧ ಕಾಮಗಾರಿಗಳು ನಡೆದಿವೆ. ಉದ್ಯೋಗ ಖಾತ್ರಿಯಲ್ಲಿ ನಮ್ಮ ಹೊಲ ನಮ್ಮ ದಾರಿ, ಕೆರೆ ಹೂಳು, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಸೇರಿದಂತೆ ನಾನಾ ಕೆಲಸಗಳು ಚುರುಕಾಗಿ ನಡೆಯುತ್ತಿವೆ.
ಸಾರ್ವಜನಿಕ ಹಾಗೂ ರೈತರ ವೈಯಕ್ತಿಕ ಕಾಮಗಾರಿ ಸೇರಿ ಏಪ್ರಿಲ್ ಮಾಹೆಯಿಂದ ಜೂನ್ 20ರವರೆಗೆ 2 ಲಕ್ಷ 26,792 ಮಾನವ ದಿನ ಸೃಜನೆ ಮಾಡಿ ಕೆಲಸ ಒದಗಿಸಲಾಗಿದೆ. ಕೂಲಿ ಹಣ ಪಾವತಿಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದ್ದು, ಜನರಿಗೆ ಹೆಚ್ಚೆಚ್ಚು ಕೆಲಸ ನೀಡಿ ನಿರುದ್ಯೋಗದ ಅಭದ್ರತೆ ಕಾಡದಂತೆ ನೋಡಿಕೊಳ್ಳಲಾಗುತ್ತಿದೆ.
ಕೊವಿಡ್-19 ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಕೇವಲ ಉದ್ಯೋಗ ಮಾತ್ರ ನೀಡದೇ ಅವರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಮಟ್ಟದ ಕಾರ್ಯಪಡೆ ಸಿಬ್ಬಂದಿಗಳು ಜನರಲ್ಲಿ ಸಾಕಷ್ಟು ಆರೋಗ್ಯ ತಿಳುವಳಿಕೆ ನೀಡುತ್ತಿದ್ದಾರೆ. ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಂಡೇ ಕೆಲಸಗಳನ್ನು ಮಾಡಲಾಗುತ್ತಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಒಟ್ಟಾರೆ ಉದ್ಯೋಗದ ಜತೆಗೆ ಜನರ ಆರೋಗ್ಯವೂ ನಮಗೆ ತುಂಬಾ ಮುಖ್ಯ ಎಂದು ಹೇಳುತ್ತಾರೆ ತಾಪಂ ಕಾರ್ಯನಿರ್ವಹಣಾಕಾರಿ ಜಾನಕೀರಾಂ.
ಮಹಿಳೆಯರು ಮತ್ತು ಪುರುಷರಾಗಿ ಸಮಾನ ವೇತನ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಕೂಲಿ ಹಣ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಪ್ರತಿದಿನ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. 33 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಲಸ ಕೇಳಿದ ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಒದಗಿಸಲಾಗುತ್ತಿದ್ದು, ಪಿಡಿಓ, ಕಾರ್ಯದರ್ಶಿಗಳು ಕಾರ್ಯೋನ್ಮುಖರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
