ಚಿತ್ರದುರ್ಗ:
ಸಂವಿಧಾನದಡಿ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಯಶಸ್ವಿಯಾಗಲು ಸಾಧ್ಯ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ವಿಕಲಚೇತನರಿಗೆ ಕರೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬಸವೇಶ್ವರ ವಿದ್ಯಾಸಂಸ್ಥೆ ಇವರುಗಳ ಸಹಯೋಗದೊಂದಿಗೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಬುಧುವಾರ ನಡೆದ ವಿಕಲಚೇತನರಿಗೆ ಮತದಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳು ಇದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಿ. ಸಂವಿಧಾನದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೆ ಓಟುವ ಚಲಾಯಿಸುವ ಹಕ್ಕು ನೀಡಲಾಗಿದೆ. ಹಾಗಾಗಿ ಇದೇ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮತವನ್ನು ಅರ್ಹರಿಗೆ ನೀಡಿ ದೇಶದ ಅಭಿವೃದ್ದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ ವಿಕಲಚೇತನರು ಎಲ್ಲರಂತೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಭಾರತ ಚುನಾವಣಾ ಆಯೋಗ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸಿದೆ. ಮತಗಟ್ಟೆಗಳಲ್ಲಿ ರ್ಯಾಂಪ್, ರೇಲಿಂಗ್ಸ್, ಗಾಲಿಕುರ್ಚಿ, ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಂದ ದೃಷ್ಟಿಯುಳ್ಳವರಿಗೆ ಭೂತಗನ್ನಡಿ, ಪೂರ್ಣ ದೃಷ್ಟಿ ನೂನ್ಯತೆಯುಳ್ಳವರಿಗೆ ಬ್ರೈಲ್ ಲಿಪಿಯಲ್ಲಿ ಚುನಾವಣಾ ಮಾರ್ಗದರ್ಶಿ ಕೈಪಿಡಿ ನೀಡಲಾಗುವುದು. ಮತಗಟ್ಟೆಗಳಲ್ಲಿ ಬ್ರೈಲ್ ಬ್ಯಾಲೆಟ್ ಪೇಪರ್ ಇಡಲಾಗುವುದು. ಇವೆಲ್ಲದರ ಸಹಾಯದಿಂದ ವಿಕಲಚೇತನರು ಅಭ್ಯರ್ಥಿಯ ಕ್ರಮ ಸಂಖ್ಯೆ ತಿಳಿದು ಮತದಾನ ಮಾಡಬಹುದು ಎಂದು ಹೇಳಿದರು.
ಸುಗಮ ಮತದಾನಕ್ಕೆ ವಿಶೇಷ ಸಿಬ್ಬಂದಿಗಳ ನೆರವು ಒದಗಿಸಿದ್ದು, ವಿಕಲಚೇತನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವಂತಿಲ್ಲ. ವಾಹನಗಳ ವ್ಯವಸ್ಥೆ ಹಾಗೂ ಗಾಲಿಕುರ್ಚಿ ಬೇಕಾಗಿರುವವರು ಚುನಾವಣಾ ಆಪ್ ಮೂಲಕ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು ಎಂದು ವಿನಂತಿಸಿದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮಂಜುನಾಥ್ ಎಸ್.ನಾಡರ್, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಸ್ವೀಪ್ ಸಮಿತಿಯ ಬಷೀರ್, ಕಿವುಡ ಹಾಗೂ ಮೂಗರ ಸಂಘದ ಅಧ್ಯಕ್ಷ ಡಿ.ಅವಿನಾಶ್ ವೇದಿಕೆಯಲ್ಲಿದ್ದರು.
ಶ್ವೇತ ಮತ್ತು ಸುರಕ್ಷಾ ಪ್ರಾರ್ಥಿಸಿದರು. ಡಿ.ರವಿಕುಮಾರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
