ಬೆಂಗಳೂರು
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಸೋಂಕಿತರ ಸಮಸ್ಯೆ ಒಂದಾದರೆ, ಸೋಂಕು ತಗುಲಿಲ್ಲದ ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೊರೋನಾ ಇಲ್ಲದಿದ್ದರೂ ಡಯಾಲಿಸಿಸ್ ರೋಗಿಗೆ ಚಿಕಿತ್ಸೆ ದೊರಕದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಪ್ರಕರಣವೊಂದು ನಗರದ ನೀಲಸಂದ್ರದಲ್ಲಿ ವರದಿಯಾಗಿದೆ.ನೀಲಸಂದ್ರದ ಆಟೋಚಾಲಕನೊಬ್ಬರ ತಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ತಂದೆಯನ್ನು ಡಯಾಲಿಸಿಸ್ ಚಿಕಿತ್ಸೆ ಕೊಡಿಸಲು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಗ ಮೊದಲೂ ಕೋವಿಡ್-19 ಪರೀಕ್ಷೆ ವರದಿ ತಂದಾಗ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಕೆಲವರು ವಾಪಸ್ಸು ಕಳುಹಿಸಿದರೆ, ಇನ್ನು ಕೆಲವೆಡೆ ಕೋವಿಡ್-19 ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ವಾಪಸ್ಸು ಕಳಿಸುತ್ತಿದ್ದಾರೆ ಎಂದು ಆಟೋ ಚಾಲಕ ಗಂಭೀರವಾಗಿ ಆರೋಪಿಸಿದ್ದಾರೆ.
ತಾವು ನಗರದ ವಿಕ್ಟೋರಿಯಾ, ಬೌರಿಂಗ್, ಕೆಸಿ ಜನರಲ್, ಸಂಜಯ್ ಗಾಂಧಿ, ಕಿಮ್ಸ್, ರಾಜ ರಾಜೇಶ್ವರಿ ಮೆಡಿಕಲ್ ಕಾಲೇಜ್ ಹೀಗೆ ಎಲ್ಲಾ ಕಡೆ ಹೋಗಿದ್ದೇವೆ. ಆದರೆ, ಯಾರೂ ಕೂಡ ತಮ್ಮ ತಂದೆಗೆ ಚಿಕಿತ್ಸೆ ನೀಡಲು ಮುಂದಾಗದೇ ವಾಪಸ್ಸು ಕಳುಹಿಸುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಸಂಪಾದನೆ ಆಗಿಲ್ಲ. ಹೀಗಾಗಿ ತಮ್ಮ ತಂದೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವುದು ಕಷ್ಟವಾಗಿದೆ ಎಂದು ಆಟೋ ಚಾಲಕ ತಮ್ಮ ಅಳಲನ್ನು ಮಾಧ್ಯಮ ಎದುರಿಗೆ ತೋಡಿಕೊಂಡಿದ್ದಾರೆ. ದಯವಿಟ್ಟು ನಮ್ಮ ತಂದೆಗೆ ಚಿಕಿತ್ಸೆ ನೀಡಿ ಎಂದು ತಮ್ಮ ಆಟೋದಲ್ಲೇ ತಂದೆಯನ್ನು ಕೂರಿಸಿಕೊಂಡು ಅವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ