ಹೊಸಪೇಟೆ:
ವಿಜಯನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ಬಿ.ಎಸ್. ಆನಂದ್ ಸಿಂಗ್ ರಾಜೀನಾಮೆ ನೀಡಿರುವುದಕ್ಕೆ ಆಕ್ರೋಶಗೊಂಡ ಬಳ್ಳಾರಿ ನಗರ ಹಾಗೂ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ರಾಣಿಪೇಟೆಯ ಶಾಸಕರ ನಿವಾಸದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೆ.ಎಸ್. ಆಂಜಿನೇಯಲು, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಶಿವಯೋಗಿ ಸೇರಿದಂತೆ ಇತರ ಮುಖಂಡರು ಶಾಸಕ ಆನಂದ್ ಸಿಂಗ್ ಮನೆಗೆ ಬೆಳಗ್ಗೆ 11.30ರ ಸುಮಾರಿಗೆ ತೆರಳಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಆನಂದ್ ಸಿಂಗ್ ಮುಖಂಡರನ್ನು ಕರೆದು ಮಾತನಾಡಲು ಮುಂದಾದಗ ಪಕ್ಷದ ಮುಖಂಡರು ವಾಗ್ವಾದಕ್ಕಿಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ.
ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸೊಪ್ಪು ಹಾಕದ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟ್ಟಿದ್ದು ಅಲ್ಲಿಂದ ಬಂದ ಬಳಿಕ ಈ ಬಗ್ಗೆ ತಮ್ಮ ಹಾಗೂ ಸ್ಥಳೀಯ ಮುಖಂಡರ ಬಳಿ ಮಾತನಾಡುವೆ ಎಂದರು.
ಇದಕ್ಕೆ ಕೆಂಡಾಮಂಡಲಗೊಂಡ ಮುಖಂಡ ಜೆ.ಎಸ್. ಆಂಜಿನೇಯಲು, ಎಚ್‍ಎನ್‍ಎಫ್ ಇಮಾಮ್ ನಿಯಾಜಿ ಇನ್ನಿತರರು ನಿವಾಸದ ಮುಂಭಾಗದ ಗೇಟ್‍ಬಳಿ ಜಮಾಯಿಸಿ ಆನಂದ್ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಜೆ.ಎಸ್. ಆಂಜಿನೇಯಲು ಮಾತನಾಡಿ, ಆನಂದ್ ಸಿಂಗ್‍ರ ಸಂಘಟನೆ, ವಚ್ರ್ಚಸ್ಸು ಗಮನಿಸಿ ಹೈಕಮಾಂಡ್ ಟಿಕೆಟ್ ನೀಡಲಾಗಿತ್ತು. ಅಲ್ಲದೆ ಇವರ ಪರ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ಮುಖಂಡರು ಆಗಮಿಸಿ ಪ್ರಚಾರ ನಡೆಸಿದ್ದರು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಅಧಿಕಾರ ನೀಡಿದ್ದರೂ ಆನಂದ್ ಸಿಂಗ್ ಇಂತಹ ಕೆಲಸಕ್ಕೆ ಮುಂದಾಗಿದ್ದು ಕ್ಷೇತ್ರದ ಜನರಿಗೆ, ಪಕ್ಷಕ್ಕೆ ದ್ರೋಹಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿಬಿಐ, ಇಡಿ ದುರುಪಯೋಗ: ಕೇಂದ್ರ ಸರಕಾರ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆನಂದ್ ಸಿಂಗ್‍ರನ್ನು ಬೇದರಿಸುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಮುಂದಾಗಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು. ಕಾಂಗ್ರೆಸ್ ಮುಖಂಡರಾದ ಅಬ್ದುಲ್ ವಾಹಬ್, ಸೋಮಪ್ಪ, ಫಹೀಂ ಬಾಷಾ, ರಾಮಕೃಷ್ಣ, ಗುಜ್ಜಲ್ ನಾಗರಾಜ್, ವೆಂಕಟೇಶ್ ರೆಡ್ಡಿ, ಎಂ. ರಫೀಕ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
