ಹೇಮಾವತಿ ಸಲಹಾ ಸಮಿತಿ ಸಭೆ ಬೆಂಗಳೂರಿಗೆ ಶಿಫ್ಟ್

0
25

ತುಮಕೂರು:

     ತುಮಕೂರು ನಾಲಾ ವ್ಯಾಪ್ತಿಗೆ ನಿಗದಿಯಾಗಿರುವ ನೀರನ್ನು ಸಮರ್ಪಕವಾಗಿ ಮತ್ತು ನಿಗದಿತವಾಗಿ ಹರಿಸಬೇಕು. ಈ ವಿಷಯದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್‍ಗಳು ನೀಡುತ್ತಿರುವ ಅಂಕಿ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಬಲವಾದ ಮಾತುಗಳು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳಿಂದ ಕೇಳಿಬಂದವು.

        ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಲೋಕೋಪಯೋಗಿ ಸಚಿವ ಹಾಗೂ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳ ಒತ್ತಾಯವೂ ಇದೇ ಆಗಿತ್ತು.
ಜಿಲ್ಲೆಯ ನೀರಾವರಿ ಸೌಲಭ್ಯ, ಕುಡಿಯುವ ನೀರಿಗಾಗಿ ಆದ್ಯತೆ ಮೇಲೆ ಅಗತ್ಯತೆಗನುಗುಣವಾಗಿ ನಿರ್ಧರಿತ ನೀರನ್ನು ಜಲಾಶಯದಿಂದ ನಾಲೆಗೆ ಹರಿಸಲಾಗುತ್ತಿದ್ದರೂ ಜನರಿಗೆ ಸದ್ಬಳಕೆಯಾಗುತ್ತಿಲ್ಲ. ಸಕಾಲದಲ್ಲಿ ನಾಲೆಯ ಹೂಳೆತ್ತದಿದ್ದಲ್ಲಿ ನೀರು ಸಂಗ್ರಹವಾಗದೆ ಸಮಸ್ಯೆ ಉದ್ಭವವಾಗುತ್ತಿದೆ. ಹೂಳೆತ್ತಲು ಬೇಕಾಗಿರುವ ಅನುದಾನವನ್ನು ಅಧಿಕಾರಿಗಳಿಂದ ಪ್ರಸ್ತವಾನೆ ಬಂದ ಕೂಡಲೇ ಒದಗಿಸಲಾಗುವುದು ಎಂದು ಹೆಚ್.ಡಿ.ರೇವಣ್ಣ ಭರವಸೆ ನೀಡಿದರು.

       ತುಮಕೂರು ವ್ಯಾಪ್ತಿಯಲ್ಲಿರುವ ನಾಲೆಯು 1445 ಕ್ಯೂಸೆಕ್ಸ್ ನೀರು ಹರಿಯುವ ಸಾಮಥ್ರ್ಯವಿದ್ದು, ಹೂಳು ತುಂಬಿಕೊಂಡು ಗಿಡ-ಮರಗಳು ಬೆಳೆದುಕೊಂಡಿರುವುದರಿಂದ ನೀರು ಸಂಗ್ರಹವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಂಸದ ಮುದ್ದಹನುಮೇಗೌಡ ಅವರು ಸಚಿವರ ಗಮನಕ್ಕೆ ತಂದಾಗ ನಾಲೆಯಲ್ಲಿ ಹೂಳೆತ್ತದೆ ಬೆಳೆದಿರುವ ಗಿಡಮರಗಳನ್ನು ತೆರವು ಮಾಡದೆ ಕೈಕಟ್ಟಿ ಕುಳಿತಿರುವ ಅಧಿಕಾರಿಗಳು ಸರ್ಕಾರಿ ಕೆಲಸಕ್ಕೆ ಅಪ್ರಯೋಜಕರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ನಾಲೆಗೆ ನೀರು ಬಿಡುವ ಮುನ್ನ ಬೇಸಿಗೆಯಲ್ಲಿಯೇ ಅಧಿಕಾರಿಗಳು ಅಲ್ಪಾವಧಿ ಟೆಂಡರ್ ಕರೆದು ಹೂಳೆತ್ತುವ ಕೆಲಸ ನಿರ್ವಹಿಸಬೇಕಿತ್ತು. ಸಕಾಲದಲ್ಲಿ ಕಾಲುವೆಗಳ ದುರಸ್ತಿ ಕೈಗೊಂಡಿದ್ದರೆ ನೀರಿನ ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ನಾಲಾ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಒದಗಿಸುವ ಕುರಿತು ಮುಂದಿನ ವಾರದಲ್ಲಿ ನೀರಾವರಿ ಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಾಸಕರನ್ನೊಳಗೊಂಡ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

     ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ನಿರ್ಧರಿತ ನೀರನ್ನು ಹರಿಸಲು ಈವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣಗಳನ್ನು ಇಂಜಿನಿಯರ್‍ಗಳು ಪತ್ತೆ ಹಚ್ಚಿ, ಸರ್ಕಾರದ ಗಮನಕ್ಕೆ ತರಬೇಕು. ನಾಲೆಗಳಲ್ಲಿ ದೊಡ್ಡ ಮರಗಳು ಬೆಳೆದು ನೀರು ಹರಿಯಲು ಅಡ್ಡಿಯಾಗಿದೆ. ಅಧಿಕಾರಿಗಳು ಜಡತ್ವವನ್ನು ಬಿಡದಿದ್ದರೆ ಜಿಲ್ಲೆಯ ಜನತೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು.

      ಹೇಮಾವತಿ ನಾಲೆಯ(0-72)ನ್ನು ಆಧುನೀಕರಣಗೊಳಿಸಿರುವುದು ತೃಪ್ತಿ ತಂದಿದೆ. ಆದರೆ ಜಿಲ್ಲೆಯಲ್ಲಿ ಹಾದು ಹೋಗಿರುವ ಉಳಿದ ಉದ್ದದ ನಾಲೆಯನ್ನು ಹಂತ ಹಂತವಾಗಿ ಆಧುನೀಕರಣಗೊಳಿಸುವ ಕೆಲಸವಾಗಬೇಕು. ನಾಲೆಗಳನ್ನು ಆಧುನೀಕರಣಗೊಳಿಸದಿದ್ದರೆ ಉಪಯೋಗಕ್ಕೆ ಬಾರದೆ ಹೆಸರಿಗೆ ಮಾತ್ರ ನಾಲೆಗಳಿರುತ್ತವೆ ಅಷ್ಟೇ. ನೀರು ಹರಿಯದಿರುವ ಬಗ್ಗೆ ಲೆಕ್ಕವಿಲ್ಲದಷ್ಟು ಅಧಿಕಾರಿಗಳ ಸಭೆ, ಜನಪ್ರತಿನಿಧಿಗಳಿಂದ ನಾಲಾ ವೀಕ್ಷಣೆಗಳು ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಪ್ರತೀ ವರ್ಷ ಹೇಮಾವತಿ ನೀರನ್ನು ಹರಿಸುವುದು ದೊಡ್ಡ ಹೋರಾಟವಾಗಿ ಪರಿಣಮಿಸುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

      ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ರಾಮಕೃಷ್ಣಪ್ಪ ಮಾತನಾಡಿ, ಹೇಮಾವತಿ ಜಲಾಶಯದ 228 ಕಿ.ಮೀ. ಉದ್ದದ ತುಮಕೂರು ಶಾಖಾ ನಾಲೆಯು ತಿಪಟೂರು, ತುರುವೇಕೆರೆ, ಗುಬ್ಬಿ, ತುಮಕೂರು, ಕುಣಿಗಲ್ ತಾಲ್ಲೂಕಿನಲ್ಲಿ ಹಾದು ಹೋಗಿದ್ದು, ನಾಲೆಯ ಮೂಲಕ ಜಿಲ್ಲೆಯ, ನೀರಾವರಿ ಸೌಲಭ್ಯ, ಕುಡಿಯುವ ನೀರಿನ ಯೋಜನೆ ಹಾಗೂ ಜನ-ಜಾನುವಾರುಗಳಿಗೆ ಆದ್ಯತೆ ಮೇರೆಗೆ ನೀರನ್ನು ಹರಿಸಲಾಗುತ್ತಿದೆ. ಪ್ರತೀ ತಿಂಗಳು ಕ್ರಿಯಾ ಯೋಜನೆ ರೂಪಿಸಿ ನೀರನ್ನು ನಾಲೆಗೆ ಹರಿಸಲಾಗುತ್ತಿದ್ದು, ಅಕ್ಟೋಬರ್ ಮಾಹೆಯಲ್ಲಿ ನೀರನ್ನು ಹರಿಸುವ ಪ್ರಮಾಣದ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈವರೆಗೂ ಜಿಲ್ಲೆಗೆ 14 ಟಿಎಂಸಿ ನೀರು ಬಿಡುಗಡೆಯಾಗಿದೆ. ಈ ನೀರಿನಿಂದ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ 246 ಕೆರೆಗಳ ಪೈಕಿ 92 ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಲಾಗಿದೆ. ಉಳಿದ ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. ಮುಖ್ಯ ಕಾಲುವೆಯಿಂದ ವಿತರಣಾ ನಾಲೆಗಳಿಂದ ರೈತರ ಬೆಳೆಗೆ ನೀರನ್ನು ಬಿಡಲಾಗಿದೆ ಅಲ್ಲದೆ ಪಿಕ್-ಅಪ್, ಚೆಕ್ ಡ್ಯಾಂಗಳನ್ನು ತುಂಬಿಸಲಾಗಿದೆ ಎಂದು ಮಾಹಿತಿ ನೀಡಿದರು.

      ಕುಣಿಗಲ್ ಶಾಸಕ ಡಾ|| ಹೆಚ್.ಡಿ. ರಂಗನಾಥ ಮಾತನಾಡಿ, ನಾಲೆಯ ನೀರು ಕುಣಿಗಲ್ ಕೆರೆಗೆ ಇನ್ನೂ ತಲುಪೇ ಇಲ್ಲ. ಕುಣಿಗಲ್ ಕೆರೆಗೆ ನೀರು ತರುವಲ್ಲಿ ಸ್ಥಳೀಯ ಅಧಿಕಾರಿಗಳ ಸಹಕಾರವಿಲ್ಲ. ಗೂರೂರು ಜಲಾಶಯದಿಂದ ನೀರು ಹರಿಸಿದ್ದರೂ ನಾಲೆಯಲ್ಲಿರುವ ಹೂಳು, ಗಿಡ-ಮರಗಳಿಂದ ನೀರು ಸಂಗ್ರಹವಾಗದೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

      ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಅಧಿಕಾರಿಗಳು ಸಮಯಕ್ಕೆ ಕೈಗೆ ಸಿಗುವುದೇ ಇಲ್ಲೆ. ಸಭೆಯಲ್ಲಿದ್ದೇನೆಂದು ನೆಪ ಹೇಳುತ್ತಿರುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ನಾಲೆ ನೀರಿಗೆ ಮೋಟಾರು ಪಂಪು ಬಳಸಿ ಅನಧಿಕೃತವಾಗಿ ನೀರೆತ್ತುತ್ತಿರುವುದರಿಂದ ನೀರು ಸರಿಯಾಗಿ ಹರಿಯದೆ ಸಮಸ್ಯೆ ತಲೆದೋರುತ್ತಿದೆ. ಅಧಿಕಾರಿಗಳು ಇಂತಹ ಅನಧಿಕೃತ ಸಂಪರ್ಕಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು. ಚಿ.ನಾ.ಹಳ್ಳಿ ತಾಲ್ಲೂಕಿನ ಕೆರೆಗಳಲ್ಲಿ ಒಂದು ಡ್ರಾಪ್ ನೀರಿಲ್ಲ. ಅಧಿಕಾರಿಗಳು ಅಲ್ಲಿಗೆ ಬಂದು ನೋಡಿ ಎಂದರು.

     ಸಭೆಯಲ್ಲಿ ಸಚಿವ ಪುಟ್ಟರಾಜು, ಸಚಿವ ಎಸ್.ಆರ್.ಶ್ರೀನಿವಾಸ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ತುಮಕೂರು ಜಿಲ್ಲೆಯ ಎಲ್ಲ ಶಾಸಕರು, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೇಲೂರು ಶಾಸಕ ಮಲ್ಲೇಶ್, ಹಾಸನ, ಮಂಡ್ಯ ತಾಲ್ಲೂಕಿನ ಶಾಸಕರು, ಹೇಮಾವತಿ ಯೋಜನೆಯ ಮುಖ್ಯ ಇಂಜಿನಿಯರ್ ರಾಮಕೃಷ್ಣ, ಇಂಜಿನಿಯರ್‍ಗಳು, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ: ಶೋಭಾರಾಣಿ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here