ಬೆಂಗಳೂರು
ಮೈತ್ರಿ ಸರ್ಕಾರ ಪತನಗೊಳ್ಳಲು ತಾವು ಕಾರಣ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದೂರುತ್ತಿದ್ದಾರೆ ಸರ್ಕಾರ ಉರುಳಲು ತಾವು ಕಾರಣನಲ್ಲದಿದ್ದರೂ ತಮ್ಮನ್ನು ದೂರುತ್ತಿರುವುದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಪತನಕ್ಕೆ ತಮ್ಮನ್ನೇ ಎರಡೂ ಪಕ್ಷದ ಶಾಸಕರುಗಳು ನೇರ ಹೊಣೆಗಾರನನ್ನಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಜೀತದಾಳಿನಂತೆ 14 ತಿಂಗಳು ನಿರಂತರವಾಗಿ ದುಡಿದಿದ್ದೇನೆ. ಸಚಿವರು, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು, ಶಾಸಕರು ಸೇರಿದಂತೆ ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯ ನೀಡಿದ್ದರೂ ಸರ್ಕಾರದ ಪತನಕ್ಕೆ ಎಲ್ಲರೂ ತಮ್ಮತ್ತಲೇ ಬೊಟ್ಟು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
ಮೊದಲಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಇಷ್ಟವಿರಲಿಲ್ಲ. ಇವರೆಲ್ಲರ ವಿರೋಧದ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ನಮ್ಮ ಜೊತೆ ಮಾತುಕತೆ ನಡೆಸಿ ಒಪ್ಪಿಸಿದ್ದರು. ಆದರೆ ಮೈತ್ರಿ ಸರ್ಕಾರ ಮುಂದುವರೆಸಲು ಒಪ್ಪದ ಕಾಂಗ್ರೆಸ್ ನಾಯಕರು ಸರ್ಕಾರ ರಚನೆಯಾದ ಆರಂಭದಿಂದಲೂ ತಮಗೆ ಸರಿಯಾಗಿ ಸಹಕಾರ ನೀಡಲಿಲ್ಲ. ಇದೇನು ಗುಟ್ಟಾಗಿ ಉಳಿದಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಭೇಟಿಗೆ ಸಮಯಾವಕಾಶ ಪಡೆಯದೆ ಏಕಾಏಕಿ ಕಾಂಗ್ರೆಸ್ ಶಾಸಕರು ತಮ್ಮ ಕಚೇರಿಗೆ ಬರುತ್ತಿದ್ದರು. ಆದರೂ ಬೇಸರಿಸಿಕೊಳ್ಳದೆ ಅವರ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಾದ ಯೋಜನೆಗಳಿಗೆ ಅನುಮೋದನೆ ನೀಡುವುದಲ್ಲದೆ, ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದ್ದೇನೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 14 ತಿಂಗಳಲ್ಲಿ 19 ಸಾವಿರ ಕೋಟಿ ರೂ ಅನುದಾನ ನೀಡಿದ್ದೇನೆ. ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೋಲಿಸಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೇ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಬಹುದೊಡ್ಡ ಭಾರ ಇಳಿಸಿದಂತಾಗಿದೆ. ಕೆಲ ದಿನಗಳಿಂದ ತುಂಬಾ ಆರಾಮವಾಗಿದ್ದು, ಪಕ್ಷ ಸಂಘಟನೆ, ಕ್ಷೇತ್ರದತ್ತ ಗಮನ ಹರಿಸಲು ಅವಕಾಶ ದೊರೆತಿದೆ. ಮುಖ್ಯಮಂತ್ರಿಯಾಗಿ 14 ತಿಂಗಳು ತಾವು ಮಾಡಿದ ಒಳ್ಳೆಯ ಕೆಲಸಗಳನ್ನು ಯಾರೂ ಗುರುತಿಸಲಿಲ್ಲ ಎಂಬ ನೋವಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವುದಕ್ಕೆ ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಮುಂದೊಂದು ದಿನ ನಿಮ್ಮ ಬೆನ್ನಿಗೆ ಕಾಂಗ್ರೆಸ್ ಚೂರಿ ಇರಿಯುತ್ತಾರೆ ಎಂದು ಎಚ್ಚರಿಸಿದ್ದರು. ನಮ್ಮ ಶಾಸಕರ ವಿರೋಧ ಲೆಕ್ಕಿಸದೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದೆ. ಅವರ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ, ಅದಕ್ಕಾಗಿ ಪರಿತಪಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಗಿಂತ ಬಿಜೆಪಿ ಜೊತೆ ಸೇರಿ ಸರ್ಕಾರ ರಚಸಿಬೇಕಿತ್ತು ಎಂಬ ಅರ್ಥದಲ್ಲಿ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಕೂಡ ಕಾಂಗ್ರೆಸ್ ಜೊತೆ ಮೈತ್ರಿ ಬೇಡ ಎಂಬುದು ಪಕ್ಷದ ಶಾಸಕರ ಅಭಿಪ್ರಾಯವಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ತಮಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಕುಮಾರ ಸ್ವಾಮಿ ಹೇಳುವ ಮೂಲಕ ವಿಧಾನಸಭೆ ಉಪ ಚುನಾವಣೆ ಫಲಿತಾಂಶದ ಬಳಿಕ ಬದಲಾದ ಸನ್ನಿವೇಶದಲ್ಲಿ ಸರ್ಕಾರ ರಚಿಸುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯೂ ಕುಮಾರಸ್ವಾಮಿ ಅವರದ್ದಾಗಿದೆ ಎನ್ನಲಾಗಿದೆ.