ನಾನಿನ್ನೂ ಕಾಂಗ್ರೇಸ್ ನಲ್ಲೇ ಇದ್ದೇನೆ : ಡಾ. ಉಮೇಶ್ ಜಾಧವ್

ಬೆಂಗಳೂರು

       ತಾವಿನ್ನೂ ಕಾಂಗ್ರೆಸ್ ಪಕ್ಷದಲ್ಲಿದ್ದು, ಫೆಬ್ರವರಿ 6 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಸ್ಪಷ್ಟಪಡಿಸಿದ್ದಾರೆ.

        ಕಾಂಗ್ರೆಸ್ ನಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿರುವ ಜಾಧವ್, ಸುದ್ದಿಗಾರರ ಜತೆ ಮಾತನಾಡಿ, ಜಂಟಿ ಅಧಿವೇಶನದ ಮೊದಲ ದಿನ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವ ಬಗ್ಗೆ ಮಾಹಿತಿ ಇದ್ದು, ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

       ತಮ್ಮನ್ನು ಜಿಲ್ಲೆಯ ಯಾವುದೇ ಮುಖಂಡರು ಸಂಪರ್ಕಿಸಿಲ್ಲ. ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳು ಈಗಲೂ ಸಾಕಷ್ಟಿವೆ. ರಸ್ತೆ, ಮನೆಗಳ ನಿರ್ಮಾಣ ಕಾಮಗಾರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಸಂಪನ್ಮೂಲದ ಕೊರತೆಯಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿಲ್ಲ ಎಂದರು.

        ತಾವು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಾಧವ್, ” ನನ್ನನ್ನು ಸಂಪರ್ಕಿಸಲು ಬಯಸಿದವರಿಗೆ ತಾವು ಸದಾ ಸಂಪರ್ಕಕ್ಕೆ ಲಭ್ಯವಿದ್ದೇನೆ” ಎಂದರು.

        ತಮ್ಮ ಮುಂದಿನ ರಾಜಕೀಯ ನಿಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ” ನನ್ನ ಮುಂದಿನ ನಡೆಯ ಬಗ್ಗೆ ಗೊಂದಲದಲ್ಲಿದ್ದೇನೆ. ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿಲ್ಲ. ಜನರ ಜತೆ ನೇರವಾಗಿ ಸಂಪರ್ಕ ಮಾಡುತ್ತಿದ್ದೇನೆ. ಈಗಾಗಲೇ ಮೂರು ಸುತ್ತಿನ ಸಭೆ ನಡೆಸಿರುವುದಾಗಿ ಉಮೇಶ್ ಜಾಧವ್ ಹೇಳಿದರು.

      ” ತಮಗೆ ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಭಯವಿಲ್ಲ. ಪಕ್ಷದ ವರಿಷ್ಠರಿಗೆ ನೀಡಿದ ಭರವಸೆಯಂತೆ ಫೆಬ್ರವರಿ 6ರ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ” ಎಂದು ಸ್ಪಷ್ಟಪಡಿಸಿದರು.

        ಈ ಮಧ್ಯೆ ಕಲಬುರಗಿಯಲ್ಲಿ ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಸಂಚಾಲಕ ಶಿವಾನಂದ ಕೊಳ್ಳುರ ಮಾತನಾಡಿ, ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾವುದು ಖಚಿತ. ಆದರೆ ನಾವ್ಯಾರು ಜಾಧವ್ ಅವರನ್ನು ಬೆಂಬಲಿಸುವುದಿಲ್ಲ. ಕ್ಷೇತ್ರದಲ್ಲಿ ನಿಷ್ಟಾವಂತ ಕಾಂಗ್ರೆಸಿಗರನ್ನು ಜಾಧವ್ ನಿರ್ಲಕ್ಷಿಸಿದಾರೆ ಎಂದು ಆಪಾದಿಸಿದರು. 

        ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ಜಾಧವ್ ಪಕ್ಷದ ವಿರುದ್ಧ ತಿರುಗಿ ಬಿದ್ದು, ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿ ರಾಜಕೀಯ ಮಾಡುತ್ತಿದ್ದಾರೆ. ಜಾಧವ್ ಬಿಜೆಪಿಗೆ ಹೋಗುವುದಾದರೆ ಹೋಗಲಿ, ಚಿಂಚೋಳಿ ಮೂಲ ಕಾಂಗ್ರೆಸ್ ಮುಖಂಡರು ಯಾರು ಪಕ್ಷ ತೊರೆಯುವುದಿಲ್ಲ. ತಮ್ಮ ವಯುಕ್ತಿಕ ಹಿತಾಸಕ್ತಿಗಾಗಿ ಅವರು ಮತದಾರರನ್ನು ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap