ನವದೆಹಲಿ
ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರ (ಪಿಓಕೆ) ನಡುವಣ ಗಡಿ ನಿಯಂತ್ರಣ ರೇಖೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ಕೇಂದ್ರ ಗುರುವಾರ ಸ್ಥಗಿತ ಗೊಳಿಸಿದೆ.
ಗಡಿನಿಯಂತ್ರಣ ರೇಖೆಯ ವ್ಯಾಪಾರ ಮಾರ್ಗಗಳನ್ನು ಪಾಕಿಸ್ತಾನ ಶಕ್ತಿಗಳು ಅಕ್ರಮ ಶಸ್ತ್ರಾಸ್ತ್ರ, ಮಾದಕ ದ್ರವ್ಯ ಹಾಗೂ ನಕಲಿ ಕರೆನ್ಸಿಗಳನ್ನು ಅಕ್ರಮವಾಗಿ ರವಾನಿಸಲು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ವರದಿಗಳ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದೆ.
ಗಡಿನಿಯಂತ್ರಣ ರೇಖೆಯಲ್ಲಿ ವ್ಯಾಪಾರ ವಹಿವಾಟು ಅಮಾನತ್ತು ಆದೇಶ ಏಪ್ರಿಲ್ 19 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹಸಚಿವಾಲಯದ ಮೂಲಗಳು ಹೇಳಿವೆ.
ಜಮ್ಮುಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಸ್ಥಳೀಯ ಜನರ ನಡುವೆ ಸಾಮಾನ್ಯ ಬಳಕೆ ಸರಕು ಸರಂಜಾಮು ವಿನಿಮಯ ವಹಿವಾಟು ಗಡಿ ನಿಯಂತ್ರಣ ರೇಖೆಯಲ್ಲಿ ನಡೆಯುತ್ತದೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸಮೀಪದ ಸಲ್ಮಾಬಾದ್ ಹಾಗೂ ಪೂಂಚ್ ಜಿಲ್ಲೆಯ ಚಕ್ಕನ್ ದಾಬಾಘ್ ವ್ಯಾಪಾರ ಸೌಕರ್ಯ ಕೇಂದ್ರಗಳ ಮೂಲಕ ವ್ಯಾಪಾರ ನಡೆಯುತ್ತಿದೆ.
ಈ ಕೇಂದ್ರಗಳಲ್ಲಿ ವಾರದಲ್ಲಿ ನಾಲ್ಕು ದಿನ ವ್ಯಾಪಾರ ನಡೆಯಲಿದೆ. ಯಾವುದೇ ತೆರಿಗೆ ಇಲ್ಲದೆ, ವಸ್ತು ವಿನಿಮಯ ಆಧಾರದ ಮೇಲೆ ವ್ಯಾಪಾರ ನಡಯುತ್ತದೆ.ಗಡಿ ನಿಯಂತ್ರಣ ರೇಖೆ ವ್ಯಾಪಾರವನ್ನು ಭಾರಿ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ವ್ಯಾಪಾರದ ಸ್ವರೂಪ ಬದಲಾವಣೆಯಾಗಿದ್ದು, ಮೂರನೇ ವ್ಯಕ್ತಿಯ ವ್ಯಾಪಾರವಾಗುತ್ತಿದೆ, ಅನ್ಯ ದೇಶಗಳು ಸೇರಿದಂತೆ ಇತರ ಪ್ರದೇಶ ಉತ್ಪನ್ನಗಳು ಈ ಮಾರ್ಗದಲ್ಲಿ ಕಂಡುಬರುತ್ತಿವೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ
ವಂಚಕರು ಹಾಗೂ ದೇಶ ವಿರೋಧಿ ಶಕ್ತಿಗಳು ಈ ಮಾರ್ಗಗಳನ್ನು ಹವಾಲ ಹಣ ಸಾಗಣೆ ಸಾಗಿಸಲು, ಮಾದಕವಸ್ತು ವಸ್ತುಗಳನ್ನು ವ್ಯಾಪಾರದ ಹೆಸರಿನಲ್ಲಿ ಸಾಗಿಸುತ್ತಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.